ನೋಟು ಬ್ಯಾನ್ ಮೂರ್ಖ ನಿರ್ಧಾರ; ಪೇಟಿಎಂ ಅಂದ್ರೆ 'ಪೇ ಟು ಮೋದಿ': ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಇ-ವಾಲೆಟ್ ಕಂಪನಿ, ಪೇಟಿಎಂ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ನೋಟು ನಿಷೇಧದ ನಿರ್ಧಾರವನ್ನು ವಿರೋಧಿಸಿ ಡಿ.8 ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ನುಡಿಸುತ್ತಿದ್ದ ರೋಮನ್ ಚಕ್ರವರ್ತಿ ನೀರೋ ಗೆ ಹೋಲಿಕೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ಮೂರ್ಖತನದ ನಿರ್ಧಾರ ಎಂದು ಟೀಕಿಸಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಇ-ವಾಲೆಟ್ ಕಂಪನಿ, ಪೇಟಿಎಂ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
500, 1000 ರೂ ನೋಟುಗಳು ನಿಷೇಧವಾದ ನಂತರ ಪೇಟಿಎಂ ಹಾಗೂ ಇ-ವಾಲೆಟ್ ಸಂಸ್ಥೆಗಳಿಗೆ ಹೆಚ್ಚಿನ ಲಾಭವಾಗುತ್ತಿದೆ. ಪೇಟಿಎಂ ಅಂದರೆ ಪೇಟು ಮೋದಿ ಅಂತ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ನೋಟು ನಿಷೇಧ ದ ಹಿಂದಿರುವ ನಗದು ರಹಿತ ವಹಿವಾಟು ವ್ಯವಸ್ಥೆಯಿಂದ ಕೆಲವರಿಗಷ್ಟೇ ಗರಿಷ್ಠ ಪ್ರಮಾಣದ ಲಾಭವಾಗಲಿದೆ. ಇದರಿಂದ ದೇಶಕ್ಕೆ ಅನಾನುಕೂಲ ಉಂಟಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜನರ ಸಂಕಷ್ಟದ ಬಗ್ಗೆ ಪ್ರಧಾನಿ ಮೋದಿಗೆ ಅರಿವಿಲ್ಲ. ಜನರು ಹಣ ಸಿಗದೇ ಸಮಸ್ಯೆ ಎದುರಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ನಗುತ್ತಾ ಕಾಲಕಳೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.