ನೋಟುಗಳ ಅಪಮೌಲ್ಯ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಷಯದಲ್ಲಿ ಸರ್ಕಾರ ಸುಮ್ಮನೆ ಕೂತಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಇನ್ನು 10-15 ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದೆ. ಸಹಕಾರಿ ಬ್ಯಾಂಕ್ ಗಳಿಗೂ ನಿಷೇಧ ನಿಯಮ ಅನ್ವಯವಾಗಲಿದ್ದು ಬ್ಯಾಂಕುಗಳು ಮತ್ತು ಎಟಿಎಂಗಳಿಂದ ಹಣ ತೆಗೆಯಲು ಹೇರಿರುವ ಮಿತಿ ಕಾರಣಬದ್ಧವಾಗಿದೆ ಎಂದು ಹೇಳಿದೆ.
ನೋಟುಗಳ ರದ್ದು ಕುರಿತ ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ, ಸಹಕಾರಿ ಬ್ಯಾಂಕುಗಳಲ್ಲಿ ಹಳೆಯ 500 ಮತ್ತು 1000ದ ನೋಟುಗಳನ್ನು ಠೇವಣಿಯಿಡಲು ಅವಕಾಶ ನೀಡುವ ಉದ್ದೇಶ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ರದ್ದುಗೊಂಡ ನೋಟುಗಳನ್ನು ಬಳಸುವ ದಿನಾಂಕವನ್ನು ವಿಸ್ತರಿಸಿದಿಯೇ ಎಂದು ಮುಂದಿನ ಬುಧವಾರದೊಳಗೆ ಉತ್ತರಿಸುವಂತೆ ಕೋರ್ಟ್ ಸೂಚಿಸಿದೆ.
ಹಳೆಯ 500 ಮತ್ತು 1000ದ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡು ಒಂದು ತಿಂಗಳು ಕಳೆದರೂ ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ಇನ್ನೂ ಕೂಡ ಜನರ ಸರದಿ ಕಡಿಮೆಯಾಗಿಲ್ಲ. ನಾಗರಿಕರು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನಗದು ಪಡೆಯಲು ಹರಸಾಹಸಪಡುತ್ತಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಜನರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಸಮಸ್ಯೆಗಳುಂಟಾಗುತ್ತಿದೆ. ಅನೇಕ ಮಂದಿ ನಗದು ವಹಿವಾಟು ನಡೆಸುವುದರಿಂದ ಭಾರೀ ಸಮಸ್ಯೆಯಾಗುತ್ತಿದೆ ಎಂದು ಭಾರೀ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.
ಇದಕ್ಕೆ ಉತ್ತರಿಸಿರುವ ಸರ್ಕಾರ, ದೇಶದಲ್ಲಿ ಕಪ್ಪು ಹಣ ಸಂಗ್ರಹಣೆಯನ್ನು ಬುಡ ಸಮೇತ ಕಿತ್ತೊಗೆಯಲು ಮತ್ತು ಭಯೋತ್ಪಾದಕರು ನಕಲಿ ನೋಟುಗಳನ್ನು ಸಂಗ್ರಹಿಸಿ ಚಲಾವಣೆಗೆ ಬಳಸುವುದನ್ನು ತಪ್ಪಿಸುವುದು ನೋಟು ನಿಷೇಧದ ಹಿಂದಿನ ಉದ್ದೇಶ ಎಂದಿದೆ. ನೋಟುಗಳ ನಿಷೇಧದಿಂದ ದೀರ್ಘಾವಧಿಗೆ ಭವಿಷ್ಯದಲ್ಲಿ ಪ್ರಯೋಜನವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.