
ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಪ್ಪು ತಪ್ಪಾದ ಹೇಳಿಕೆಗಳನ್ನು ನೀಡುತ್ತಿದ್ದು, ತಮ್ಮ ತಪ್ಪಾದ ಹೇಳಿಕೆಗಳ ಮೂಲಕ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆಂದು ಹೇಳಿದ್ದಾರೆ.
ಜನರ ಸಮಸ್ಯೆಗಳು ಹಾಗೂ ಸಂಕಷ್ಟಗಳ ಬಗ್ಗೆ ಮೋದಿಯವರು ಅಸಂವೇದಿಯಂತೆ ವರ್ತಿಸುತ್ತಿದ್ದು, ಮೋದಿಯವರು ಮೊದಲು ತಮ್ಮ ಸೊಕ್ಕು ಹಾಗೂ ಮೊಂಡುತನದ ವರ್ತನೆಯನ್ನು ಬಿಡಬೇಕಿದೆ. ನೋಟು ನಿಷೇಧ ನಿರ್ಧಾರವನ್ನು ಪ್ರಧಾನಮಂತ್ರಿಗಳೇ ತೆಗೆದುಕೊಂಡಿದ್ದು, ಜನರಿಗೆ ಉತ್ತರ ನೀಡಬೇಕಾದದ್ದು ಅವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸದನದಲ್ಲಿ ಪ್ರಧಾನಿ ಮೋದಿಯವರಿಗೆ ಮಾತನಾಡಲು ವಿರೋಧ ಪಕ್ಷಗಳು ಬಿಡುತ್ತಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿರುವ ಅವರು, ಚರ್ಚೆ ನಡೆಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಪ್ರಧಾನಮಂತ್ರಿಗಳು ಬಂದು ಹೇಳಿಕೆ ನೀಡಿ ಸದನದಿಂದ ಹೊರ ಹೋಗುವುದು ನಮಗೆ ಬೇಕಾಗಿಲ್ಲ, ಮೋದಿಯವರು ಸದನಕ್ಕೆ ಬಂದು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ.
Advertisement