
ನವದೆಹಲಿ: ಕಪ್ಪುಹಣ ಕುರಿತಂತೆ ದೇಶಾದ್ಯಂತ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ದೆಹಲಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 3.25 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ.
ಅಪಾರ ಪ್ರಮಾಣದ ಹಣ ಇರುವ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದೆಹಲಿಯ ಕರೋಲ್ ಬಾಗ್ ನಲ್ಲಿರುವ ಹೊಟೆಲ್ ತಕ್ಷ್ ಇಂಟರ್ ನ್ಯಾಷನಲ್ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಐವರನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿಕರಿಂದ ಸುಮಾರು .325 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮುಂಬೈ ಮೂಲದ ಅನ್ಸಾರಿ ಅಬುಝರ್, ಫಾಜಲ್ ಖಾನ್, ಅನ್ಸಾರಿ ಅಫನ್, ರಾಜಸ್ತಾನ ಮೂಲದ ಲಡ್ಡುರಾಮ್ ಮತ್ತು ಜೋಧ್ಪುರದ ಮಹಾವೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಬಂಧಿರತನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಭಾರಿ ಪ್ರಮಾಣದ ಹಣ ಮುಂಬೈ ಮೂಲದ ಹವಾಲಾ ಏಜೆಂಟ್ ನದ್ದು ಎಂದು ತಿಳಿದುಬಂದಿದ್ದು, ಈತ ಪ್ಯಾಕೇಜಿಂಗ್ ಎಕ್ಸಪರ್ಟ್ ಎಂದು ಹೇಳಲಾಗುತ್ತಿದೆ. ಯಾವುದೇ ವಸ್ತುವನ್ನು ವಿಮಾನ ನಿಲ್ದಾಣದ ಭದ್ರತಾ ಯಂತ್ರಗಳಲ್ಲಿ ಪತ್ತೆಯಾಗದಂತೆ ಪ್ಯಾಕ್ ಮಾಡುವುದೇ ಈತನ ಕೆಲಸವಂತೆ. ಹಣವಾಗಲೀ ಅಥವಾ ಯಾವುದೇ ರೀತಿಯ ವಸ್ತುಗಳಾಗಲಿ ಏರ್ ಪೋರ್ಟ್ ನಲ್ಲಿರುವ ಎಕ್ಸ್ ರೇ ಯಂತ್ರದಲ್ಲಿ ಪತ್ತೆಯಾಗದಂತೆ ಏಈತ ಪ್ಯಾಕ್ ಮಾಡುತ್ತಾನೆ. ವಿಶಿಷ್ಟ ಟೇಪ್ ಗಳು ಹಾಗೂ ಕೆಲ ವೈರ್ ಗಳನ್ನು ಬಳಕೆ ಮಾಡಿ ಈ ರೀತಿ ವಿಶಿಷ್ಟವಾಗಿ ಪ್ಯಾಕ್ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement