ತಮ್ಮ ಸಚಿವರನ್ನೇ ಗಂಭೀರವಾಗಿ ಪರಿಗಣಿಸದ ಬಿಜೆಪಿಗೆ ರಾಹುಲ್ ಎಂದರೆ ಭಯ: ಕಾಂಗ್ರೆಸ್

ತಮ್ಮ ಸಚಿವರ ಹೇಳಿಕೆಯನ್ನೇ ಗಂಭೀರವಾಗಿ ಪರಿಗಣಿಸದ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಂದರೆ ಭಯವಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ...
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ತಮ್ಮ ಸಚಿವರ ಹೇಳಿಕೆಯನ್ನೇ ಗಂಭೀರವಾಗಿ ಪರಿಗಣಿಸದ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಂದರೆ ಭಯವಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿ ತಮ್ಮ ಸಚಿವರ ಮಾತುಗಳನ್ನೇ ಗಂಭೀರವಾಗಿ ಪರಿಗಣಿಸುವುದಿಲ್ಲ, ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡುತ್ತದೆ, ಬಿಜೆಪಿಯವರಿಗೆ ರಾಹುಲ್ ಎಂದರೆ ಭಯವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮೋದಿ ಭ್ರಷ್ಟಾಚಾರಿ ಎಂದು ಸಾಬೀತುಪಡಿಸಲು ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿಯವರಿಗೆ ಬೆಂಬಲ ಸೂಚಿಸಿರುವ ಅವರು, ಅವಕಾಶ ದೊರಕಿದ್ದೇ ಆದರೆ, ರಾಹುಲ್ ಅವರು ಸತ್ಯಾಂಶಗಳನ್ನು ಸಂಸತ್ತಿನಲ್ಲಿ ಬಹಿರಂಗ ಪಡಿಸುತ್ತಾರೆಂದು ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿರುದ್ಧ ಗಂಭೀರವಾದ ಆರೋಪ ಮಾಡಿದ್ದ ರಾಹುಲ್ ಗಾಂಧಿಯವರು, ಮೋದಿಯವರು ಖುದ್ದು ಭ್ರಷ್ಟರಾಗಿದ್ದು, ಈ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ಒಮ್ಮೆ ಸಂಸತ್ತಿನಲ್ಲಿ ನಾನು ಮಾತನಾಡಲು ಆರಂಭಿಸಿದರೆ ಮೋದಿಯವರು ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿಯೇ ಸಂಸತ್ತಿಗೆ ಬರಲು ಮೋದಿ ಹೆದರುತ್ತಿದ್ದಾರೆಂದು ಆರೋಪಿಸಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ರಾಹುಲ್ ಗಾಂಧಿಯವರನ್ನು ನೋಡಿದರೆ ಪಾಪ ಎನಿಸುತ್ತದೆ. ರಾಹುಲ್ ನನ್ನು ದೇಶದ ಜನತೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಹುಲ್ ಮಾತನ್ನು ಯಾರೂ ನಂಬುವುದಿಲ್ಲ. ಮೋದಿಯವರ ಕಾರ್ಯ ವೈಖರಿ ಹಾಗೂ ಅದ್ಭುತ ಕಾರ್ಯಗಳನ್ನು ನೋಡಿ ರಾಹುಲ್ ಗೆ ನಂಬಲು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿಗೆ ನೋವಾಗುತ್ತಿದೆ. ಹೀಗಾಗಿಯೇ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ, ರಾಹುಲ್ ಅವರನ್ನು ಯಾರೂ ನಂಬುವುದಿಲ್ಲ. ರಾಹುಲ್ ಅವರದ್ದು ಉತ್ತರ ಹಾಗೂ ಪ್ರತಿಕ್ರಿಯೆ ನೀಡುವಂತಹ ಹೇಳಿಕೆಯಲ್ಲ. ಮೋದಿಯವರು ಎಂದಿಗೂ ಮೋದಿಯೇ ಅವರಿಗೆ ಸಾಟಿಯಿಲ್ಲ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com