
ನವದೆಹಲಿ: ದುಬಾರಿ ನೋಟು ಮೇಲಿನ ನಿಷೇಧ ಕುರಿತಂತೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿಯವರು ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವೆಂಬರ್ 16 ರಿಂದ ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಅಧಿವೇಶನ ಆರಂಭವಾದಾಗಿನಿಂದಲೂ ಸಂಸತ್ತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದಿರುವುದಕ್ಕೆ ಅಡ್ವಾಣಿ ಅವರು ತಮ್ಮ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಇದ್ರೀಸ್ ಅಲಿ ಹೇಳಿದ್ದಾರೆ.
ಯಾರು ಗೆಲ್ಲಲಿ, ಬಿಡಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳಿಂದ ಪ್ರತಿಯೊಬ್ಬರಿಗೂ ಸೋಲನ್ನು ಎದುರಾಗಿದೆ. ಸ್ಪೀಕರ್ ಜೊತೆ ಮಾತನಾಡಿ ಏನೇ ಆದರೂ ನಾಳೆ ಕಲಾಪ ಸುಗಮವಾಗಿ ಸಾಗುವಂತೆ ಮಾಡಬೇಕು. ಸಂಸತ್ತಿನ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಲೋಕಸಭೆಗೆ ರಾಜೀನಾಮೆ ಸಲ್ಲಿಸಬೇಕೆಂಬ ಭಾವನೆ ನನ್ನಲ್ಲಿ ಮೂಡುತ್ತಿದೆ. ಒಂದು ವೇಳೆ ಅಟಲ್ ಬಿಹಾರಿ ವಾಜಪೇಯಿಯವರು ಸಂಸತ್ತಿನಲ್ಲಿ ಇದ್ದಿದ್ದರೆ, ಅವರೂ ಕೂಡ ಬೇಸರ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆಂದು ಇದ್ರೀಸ್ ಅಲಿ ತಿಳಿಸಿದ್ದಾರೆ.
Advertisement