
ನವದೆಹಲಿ: ಸೇನಾ ಮುಖ್ಯಸ್ಥ ನೇಮಕಾತಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಕ್ಷಣಾ ತಜ್ಞರು ಕೇಂದ್ರದ ಬೆನ್ನಿಗೆ ನಿಂತಿದ್ದು, ಸೇವಾ ಹಿರಿತನವೊಂದೇ ಸೇನಾ ಮುಖ್ಯಸ್ಥರ ಆಯ್ಕೆಗೆ ಮಾನದಂಡವಲ್ಲ ಎಂದು ಹೇಳಿದ್ದಾರೆ.
ಸೇನಾ ಮುಖ್ಯಸ್ಥರ ನೇಮಕಾತಿ ಕುರಿತಂತೆ ಎದ್ದಿರುವ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ರಕ್ಷಣಾ ತಜ್ಞ ಕರ್ನಲ್ ಡಿ.ಎಸ್ ಗ್ರೆವಾಲ್ ಅವರು, ಸೇವಾ ಹಿರಿತನವೊಂದನ್ನು ಇಟ್ಟುಕೊಂಡು ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲುವುದಿಲ್ಲ. ಸಾಕಷ್ಟು ಆಯಾಮಗಳನ್ನು ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಂಡು ನಂತರ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಸೇನಾ ಮುಖ್ಯಸ್ಥರ ನೇಮಕಾತಿ ವೇಳೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಮುಖ್ಯಸ್ಥರ ನೇಮಕ ವೇಳೆ ವೃತ್ತಿಪರ ಸಾಮರ್ಥ್ಯ ಮುಖ್ಯವಾಗುತ್ತದೆ. ಕೇವಲ ಸೇವಾ ಹಿರಿತನವೊಂದನ್ನು ಇಟ್ಟುಕೊಂಡು ಮುಖ್ಯಸ್ಥರನ್ನು ನೇಮಕ ಮಾಡಲು ಸಾಧ್ಯವಾಗುವುದಿಲ್ಲ. ಮುಖ್ಯಸ್ಥರ ನೇಮಕಾತಿ ವಿಷಯದಲ್ಲಿ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ತಿಳಿಸಿದ್ದಾರೆ.
ಮತ್ತೊಬ್ಬ ನಿವೃತ್ತ ರಕ್ಷಣಾ ತಜ್ಞ ಕರ್ನಲ್ ಸುನಿಲ್ ದೇಶಪಾಂಡೆ ಅವರು ಪ್ರತಿಕ್ರಿಯೆ ನೀಡಿ, ಸೇವಾ ಹಿರಿತನವನ್ನು ಹೊಂದಿರುವವರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕೆಂಬ ನಿಯಮವಿಲ್ಲ. ಜನರು ಸುಖಾಸುಮ್ಮನೆ ವಿಚಾರ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸರ್ಕಾರ ನಿರ್ಧಾರ ವಿರುದ್ಧ ಪ್ರಶ್ನೆ ಎತ್ತುತ್ತಿದ್ದಾರೆಂದು ಹೇಳಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಭೂ ಸೇನೆ ಸೇರಿದಂತೆ 4 ಪ್ರಮುಖ ಹುದ್ದೆಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡಿತ್ತು. ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಹಾಗೂ ಏನ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರನ್ನು ವಾಯುಪಡೆಯ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತ್ತು.
ನೇಮಕಾತಿ ಕುರಿತಂತೆ ರಾಜಕೀಯ ವಲಯದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗ ತೊಡಗಿವೆ. ಭಾರತೀಯ ಸೇನೆಯ ಮುಖಸ್ಥರ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ಸೇವಾ ಹಿರಿತನವನ್ನು ಗಾಳಿಗೆ ತೂರಿದೆ. ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಮೂಲಕ ಸೇವಾಜೇಷ್ಠತೆಯನ್ನು ಹೊಂದಿದ್ದ ಇಬ್ಬರು ಲೆಫ್ಟಿನೆಂಟ್ ಗವರ್ನರ್ ಗಳನ್ನು ಕಡೆಗಣಿಸಿದೆ ಎಂದು ಹೇಳಲಾಗುತ್ತಿತ್ತು.
Advertisement