ನವದೆಹಲಿ: ಭ್ರಷ್ಟಾಚಾರಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ಸೋಮವಾರ ಸಿಬಿಐ ತಿಳಿಸಿದೆ.
ಇತ್ತೀಚಿಗಷ್ಟೇ ನಾವು ರಾಜೇಂದ್ರ ಕುಮಾರ್ ಹಾಗೂ ಇತರರ ವಿರುದ್ಧ ಮತ್ತು ಎಂಡೆವೋರ್ ಸಿಸ್ಟಮ್ಸ್ ವಿರುದ್ಧವೂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದೇವೆ ಎಂದು ಸಿಬಿಐ ವಕ್ತಾರ ದೇವಪ್ರೀತ್ ಸಿಂಗ್ ಅವರು ಹೇಳಿದ್ದಾರೆ.
ಈ ಮುಂಚೆ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಅವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಬೇಕು ಎಂದು ಕೋರಿ ಸಿಬಿಐ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು.
ರಾಜೇಂದ್ರ ಕುಮಾರ್ ಅವರು 1989ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡು, ಎಂಡೆವೊರ್ ಸಿಸ್ಟಮ್ಸ್ ಪ್ರೈ.ಲಿ.ಗೆ ಸುಮಾರು 9.5 ಕೋಟಿ ರುಪಾಯಿ ಮೌಲ್ಯದ ಗುತ್ತಿಗೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ಈ ಸಂಬಂಧ ಜುಲೈ 4ರಂದು ಸಿಬಿಐ ಅಧಿಕಾರಿಗಳು ರಾಜೇಂದ್ರ ಕುಮಾರ್ ಅವರನ್ನು ಬಂಧಿಸಿದ್ದರು. ಬಳಿಕ ಜುಲೈ 26ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.