

ನೌಪಾದ: ಹಣವಿಲ್ಲದ ವಲಸೆ ಕಾರ್ಮಿಕರ ಸ್ಥಿತಿ ಹೇಳ ತೀರದಾಗಿದೆ. ಹೆಣ ಸಾಗಿಸಲು ಹೆಣವಿಲ್ಲದ ಕಾರಣ ವಲಸೆ ಮಹಿಳೆಯೊಬ್ಬಳು ತನ್ನ ಪತಿಯ ಶವವನ್ನು ರೈಲಿನಲ್ಲಿಯೇ ಬಿಟ್ಟು ತೆರಳಿರುವ ಘಟನೆ ನಡೆದಿದೆ.
ಒಡಿಸ್ಸಾದ ದನುಜ್ ಹೋಲಾ ಗ್ರಾಮದ ಸರೋಜಿನಿ ಮತ್ತು ಆಕೆಯ ಪತಿ ಜುಗಲ್ ನಾಗ್ ಕಳೆದ ವರ್ಷ ತಮ್ಮ ಮೂರು ಮಕ್ಕಳ ಜೊತೆ ಕೆಲಸ ಹುಡುಕಿಕೊಂಡು ಆಂಧ್ರ ಪ್ರದೇಶಕ್ಕೆ ಬಂದಿದ್ದರು. ಆಂಧ್ರದ ಗೌರಪೇಟ್ ಸಮೀಪದ ಪೈದಪುಲಿ ಬಳಿ ಮುನಿರಾಮ್ ಎಂಬಾತನ ಬಳಿ 40ಸಾವಿರ ರು ಮುಂಗಡ ಹಣ ಪಡೆದು ಕೂಲಿ ಕೆಲಸಕ್ಕೆ ಸೇರಿದ್ದರು. ಈ ವೇಳೆ ಜುಗಲ್ ನಾಗ್ ಅನಾರೋಗ್ಯಕ್ಕೆ ಒಳಗಾಗಿ ಸರಿಯಾದ ಚಿಕಿತ್ಸೆ ಹಾಗೂ ಪೌಷ್ಠಿಕ ಆಹಾರವಿಲ್ಲದೇ ಬಳಲುತ್ತಿದ್ದ.
40 ಸಾವಿರ ರು ಮುಂಗಡ ಹಣ ನೀಡಿದ್ದ ಮಾಲೀಕ ನೀಡಿದ್ದ 30 ಸಾವಿರ ರು ಹಣ ವಾಪಸ್ ಪಡೆದು ಪ್ರಯಾಣಕ್ಕಾಗಿ ಹಣ ನೀಡಿ ವಾಪಸ್ ಊರಿಗೆ ತೆರಳುವಂತೆ ಅವರನ್ನು ಅಲ್ಲಿಂದ ಕಳುಹಿಸಿದ, ಸರೋಜಿನಿ ತನ್ನ ಮೂರು ಮಕ್ಕಳು ಹಾಗೂ ಪತಿಯೊಡನೇ ಡಿಸೆಂಬರ್ 11 ರಂದು ಮಧ್ಯಾಹ್ನ ರೈಲಿನಲ್ಲಿ ಬಂದು ನಾಗ್ಪುರ ತಲುಪಿದರು. ಈ ವೇಳೆ ಜುಗಲ್ ನಾಗ್ ಸಾವನ್ನಪ್ಪಿದ. ನಾಗಪುರದಿಂದ ತಮ್ಮ ಸ್ವಗ್ರಾಮಕ್ಕೆ ತೆರೆಳಲು ಅವರು ಮತ್ತೊಂದು ರೈಲು ಹತ್ತಬೇಕಿತ್ತು, ಆದರೆ ಶವವನ್ನು ಸಾಗಿಸಲು ಯಾರ ಸಹಾಯವಿಲ್ಲದ ಕಾರಣ, ಜೊತೆಗೆ ಹಣ ಕೂಡ ಇರದಿದ್ದರಿಂದ ಆಕೆ ಶವವನ್ನು ಅಲ್ಲಿಯೇ ಬಿಟ್ಟು ಹೋಗಲು ನಿರ್ಧರಿಸಿ, ಅಲ್ಲಿಂದ ಮಕ್ಕಳೊಡನೆ ತನ್ನೂರಿಗೆ ತೆರಳಿದ್ದಾಳೆ.
ಮನೆಗೆ ಬಂದು ತನ್ನ ಪತಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾಳೆ, ಮೂರು ಮಕ್ಕಳು ಹಾಗೂ ಅತ್ತೆಯನ್ನು ಸಾಕುವ ಜವಾಬ್ದಾರಿ ಸರೋಜಿನಿ ಹೆಗಲ ಮೇಲೆ ಬಿದ್ದಿದೆ.