
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಂಗೆಯಷ್ಟೇ ಪವಿತ್ರರಾಗಿದ್ದು, ಅವರನ್ನು ಟೀಕಿಸುವ ಯೋಗ್ಯತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿಲ್ಲ ಎಂದು ಬಿಜೆಪಿ ಬುಧವಾರ ಹೇಳಿದೆ.
ರಾಹುಲ್ ಗಾಂಧಿಯವರ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಅವರು, ಪದೇ ಪದೇ ಚುನಾವಣೆಯಲ್ಲಿ ಸೋಲು ಕಾಣುತ್ತಿರುವುದರಿಂದ ರಾಹುಲ್ ಗಾಂಧಿಯವರು ನಿರಾಶೆಗೊಂಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ವಿವಿಐರಿ ಅಗಸ್ಟಾವೆಸ್ಟ್'ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ರಾಹುಲ್ ಅವರ ಇಡೀ ಕುಟುಂಬದ ಹೆಸರು ಕೇಳಿಬಂದಿದ್ದು, ಪ್ರಕರಣ ಕುರಿತು ಜನರ ಗಮನವನ್ನು ಬೇರೆಡೆ ಸೆಳೆಯಲು ರಾಹುಲ್ ಯತ್ನ ನಡೆಸುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನಿನಿಂದ ಹೊರಗೆ ಬಂದಿದ್ದೇನೆಂಬುದನ್ನು ರಾಹುಲ್ ನೆನಪಿಸಿಕೊಳ್ಳಬೇಕಿದೆ.
ಪ್ರಧಾನಿ ಮೋದಿಯವರ ವಿರುದ್ಧ ಆರೋಪ ಮಾಡುತ್ತಲಿರುವ ರಾಹುಲ್ ಗಾಂಧಿಯವರು ಮನಮೋಹನ್ ಅವರ ಅಧಿಕಾರಾವಧಿಯಲ್ಲಿ ಕೇಳಿಬಂದ ಸರಣಿ ಭ್ರಷ್ಟಾಚಾರದ ಬಗ್ಗೆ ಒಂದು ಪದವನ್ನು ಮಾತನಾಡಲಿಲ್ಲ. ಆಕಾಶ, ಬಾಹ್ಯಾಕಾಶ, ಭೂಮಿ, ಭೂಗರ್ಭ ಮತ್ತು ಸಮುದ್ರದ ಅಡಿಯನ್ನೂ ಬಿಡದೆ ಎಲ್ಲೆಡೆ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದೆ.
ಆರೋಪಗಳನ್ನು ಮಾಡುವುದು ಇತ್ತೀಚೆಗೆ ರಾಹುಲ್ ಗೆ ಅಭ್ಯಾಸವಾಗಿ ಹೋಗಿದೆ. ಆದರೆ, ಪ್ರಧಾನಿ ಮೋದಿ ಗಂಗೆಯಷ್ಟೇ ಪವಿತ್ರವಾಗಿದ್ದು, ನಮ್ಮ ಪ್ರಧಾನಿ ವಿರುದ್ಧ ರಾಹುಲ್ ಮಾಡುತ್ತಿರುವ ಆಧಾರ ರಹಿತ ಆರೋಪವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಗುಜರಾತ್ ನ ಮೆಹ್ಸನಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದರು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಕಂಪನಿಯಿಂದ ಕೋಟ್ಯಂತರ ರುಪಾಯಿ ಕಿಕ್ ಬ್ಯಾಕ್ ಪಡೆದಿದ್ದು, ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಇದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಸಹರಾ ಕಂಪೆನಿಯ ಕಚೇರಿಯ ಮೇಲೆ 2014ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಮೋದಿ ಅವರಿಗೆ ಹಣ ನೀಡಿರುವ ದಾಖಲೆಗಳೂ ಪತ್ತೆಯಾಗಿವೆ. 2013ರ ಅಕ್ಟೋಬರ್‌ನಿಂದ 2014ರ ಫೆಬ್ರುವರಿವರೆಗೆ ಸಹರಾ ಕಂಪೆನಿಯಿಂದ ಮೋದಿ ಅವರು 40 ಕೋಟಿ ರುಪಾಯಿ ಪಡೆದಿದ್ದಾರೆಂದು ಆರೋಪಿಸಿದ್ದರು.
Advertisement