ಯುಪಿಎ ಅವಧಿಯಲ್ಲಿ ಅಂಬಾನಿ, ಅದಾನಿಗೆ 1,85,000 ರೂ. ಕೋಟಿ ಸಾಲ: ಬಿಜೆಪಿ

ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯಮಿಗಳಿಗೆ ನೀಡಲಾಗಿದ್ದ ಸಾಲದ ಮೊತ್ತ ಹಾಗೂ ಸಾಲ ಮನ್ನಾ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಬಿಜೆಪಿ ವಕ್ತಾರ ಶ್ರೀಕಾಂತ್ ಶರ್ಮಾ
ಬಿಜೆಪಿ ವಕ್ತಾರ ಶ್ರೀಕಾಂತ್ ಶರ್ಮಾ
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂಬಾನಿ, ಅದಾನಿ ಸೇರಿದಂತೆ ಉದ್ಯಮಿಗಳ ಪರವಾಗಿದೆ. 50 ಉದ್ಯಮಿಗಳ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಅನುಕೂಲವಾಗಿದೆ ಎಂಬ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯಮಿಗಳಿಗೆ ನೀಡಲಾಗಿದ್ದ ಸಾಲದ ಮೊತ್ತ ಹಾಗೂ ಸಾಲ ಮನ್ನಾ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದೆ. 
ದಾಖಲೆ ಬಿಡುಗಡೆ ಮಾಡಿ ಮಾತನಾಡಿರುವ ಬಿಜೆಪಿ ವಕ್ತಾರ ಶ್ರೀಕಾಂತ್ ಶರ್ಮ, ಯುಪಿಎ ಸರ್ಕಾರದ ಎರಡು ಅವಧಿಯ ಆಡಳಿತದಲ್ಲಿ ಅದಾನಿಗೆ 72,000 ಕೋಟಿ ರೂ ಹಾಗೂ ಅಂಬಾನಿ ಸಂಸ್ಥೆಗೆ 1,13,000 ಕೋಟಿ ರೂಪಾಯಿಯಷ್ಟು ಸಾಲ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರದ ಎರಡು ಅವಧಿಯ ಆಡಳಿತದಲ್ಲಿ ಉದ್ಯಮಿಗಳಿಗೆ ನೀಡಲಾಗಿದ್ದ ಒಟ್ಟು ಸಾಲದ ಪೈಕಿ 36.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದರೆ, ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂಬಾನಿ, ಅದಾನಿ ಸಂಸ್ಥೆಗಳಿಗೆ ನೀಡಲಾಗಿದ್ದ ಸಾಲವನ್ನು ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 
"ಕಾಂಗ್ರೆಸ್ ಸರ್ಕಾರ ಉದ್ಯಮಿಗಳಿಗೆ ಅತಿ ಹೆಚ್ಚು ಸಾಲ ನೀಡಿ ಅವುಗಳಲ್ಲಿ ಒಂದಷ್ಟು ಸಾಲವನ್ನು ಮನ್ನಾ ಸಹ ಮಾಡಿತ್ತು. ಆದರೆ ವಸೂಲಿ ಮಾಡಲು ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕಾಯಿತು" ಎಂದು ಶ್ರೀಕಾಂತ್ ಶರ್ಮ ಹೇಳಿದ್ದಾರೆ. 
ನೋಟು ನಿಷೇಧವನ್ನು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಘೋಷಿಸಲಾಗಿರುವ ಯೋಜನೆ, ನರೇಂದ್ರ ಮೋದಿ ಸರ್ಕಾರ ಉದ್ಯಮಿಗಳ ಪರವಾಗಿರುವ ಸರ್ಕಾರ ಹಾಗೂ ವಿಜಯ್ ಮಲ್ಯ ಪರಾರಿಯಾಗಲು ಕೇಂದ್ರ ಸರ್ಕಾರ ನೆರವು ನೀಡಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಆರೋಪಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಬಿಜೆಪಿ ಯುಪಿಎ ಸರ್ಕಾರದ ಅವಧಿಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕಿಂಗ್ ಫಿಶರ್ ಸಮೂಹ ಸಂಸ್ಥೆಗೆ ಸಹಾಯ ಮಾಡಲು ಮುಂದಾಗಿದ್ದ ಅಂಶವನ್ನೂ ಬಹಿರಂಪಡಿಸಿದೆ. 
2005-06 ರಿಂದ 2013-14 ರ ಅವಧಿಯಲ್ಲಿ ಬ್ಯಾಡ್ ಲೋನ್ ಶೇ.132 ರಷ್ಟು ಏರಿಕೆಯಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಬ್ಯಾಡ್ ಲೋನ್ ಪ್ರಮಾಣ ವೇಗವಾಗಿ ಬೆಳೆಯಲು ಕಾರಣವನ್ನು ಕಾಂಗ್ರೆಸ್ ವಿವರಿಸಬೇಕೆಂದು ದಾಖಲೆ ಬಿಡುಗಡೆ ಮಾಡಿರುವ ಬಿಜೆಪಿ ಆಗ್ರಹಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com