ಚಾರ್ ಧಾಮ್ ಹೆದ್ದಾರಿ ಯೋಜನೆ 2013ರ ಪ್ರವಾಹದಲ್ಲಿ ಮೃತಪಟ್ಟವರಿಗೆ ಅರ್ಪಣೆ: ಮೋದಿ

ಉತ್ತರಾಖಂಡದಲ್ಲಿ ರೂಪಿಸಲಾಗಿರುವ ಚಾರ್ ಧಾಮ್ ಹೆದ್ದಾರಿ ಯೋಜನೆ 2013ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟವರಿಗೆ ಅರ್ಪಣೆ ಮಾಡುತ್ತಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ...
ಚಾರ್'ಧಾಮ್ ಹೆದ್ದಾರಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಚಾರ್'ಧಾಮ್ ಹೆದ್ದಾರಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
Updated on

ನವದೆಹಲಿ: ಉತ್ತರಾಖಂಡದಲ್ಲಿ ರೂಪಿಸಲಾಗಿದ್ದ ಚಾರ್ ಧಾಮ್ ಹೆದ್ದಾರಿ ಯೋಜನೆ 2013ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟವರಿಗೆ ಅರ್ಪಣೆ ಮಾಡುತ್ತಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಚಾರ್ ಧಾಮ್ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಪ್ರವಾಸೋದ್ಯಮ ಮತ್ತು ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಪಡಿಸುವ ನಟ್ಟಿನಲ್ಲಿ ಚಾರ್ ಧಾಮ್ ಹೆದ್ದಾರಿ ಯೋಜನೆಯಡಿಯಲ್ಲಿ 9000 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಯಲ್ಲಿ ಸುರಂಗಗಳು, ಸೇತುವೆ ಮತ್ತು ಮೇಲ್ಸೇತುವೆ ನಿರ್ಮಾಣ ಕೂಡ ಹೆದ್ದಾರಿ ಯೋಜನೆಯಲ್ಲಿ ಭಾಗಗಳಾಗಿವೆ.

ಕೇದರನಾಥ, ಬದ್ರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಉತ್ತಮ ಸಂಪರ್ಕ ಕಲ್ಪಿಸುವ ಮೂಲಕ ಚಾರ್ ಧಾಮ್ ಯಾತ್ರೆಗೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದ್ದು, ಯೋಜನೆಗೆ ಕೇಂದ್ರ ರು.13,000 ಕೋಟಿಯನ್ನು ಹೂಡಿಕೆ ಮಾಡಿದೆ ಎಂದು ತಿಳಿದುಬಂದಿದೆ.

ಚಾರ್ ಧಾಮ್ ಹೆದ್ದಾರಿ ಯೋಜನೆಗೆ ಚಾಲನೆ ನೀಡಿದ ಬಳಿಕ ಪರಿವರ್ತನ್ ರ್ಯಾಲಿಯನ್ನುದ್ದೇಶಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರಮೋದಿಯವರು, ಚಾರ್ ಧಾಮ್ ಹೆದ್ದಾರಿ ಯೋಜನೆ 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟವರಿಗೆ ಅರ್ಪಿಸುತ್ತಿದ್ದೇನೆ. ಅಭಿವೃದ್ಧಿಗಾಗಿ ಇನ್ನು ಉತ್ತರಾಖಂಡ ಎದುರು ನೋಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಉತ್ತರಾಖಂಡದ ಭೂಮಿ ದೇವಭೂಮಿಯಾಗಿದ್ದು, ದೇವತೆಗಳಿರುವ ನಾಡಾಗಿದೆ. ಕೆಚ್ಚೆದೆಯ ಭೂಮಿಯಾಗಿದೆ. ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದ್ದೀರಿ. ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿರುವುದನ್ನು ನಾನು ನೋಡುತ್ತಿದ್ದೇನೆ. ರ್ಯಾಲಿಯಲ್ಲಿ ಮಹಿಳೆಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಇನ್ನು ಮುಂದೆ ಅಭಿವೃದ್ಧಿಗಾಗಿ ಉತ್ತರಾಖಂಡ ಕಾಯುವ ಅಗತ್ಯವಿಲ್ಲ. ದೇಶದಲ್ಲಿರುವ 125 ಜನರಿಗೆ ಸಾಮಾನ್ಯ ಸೌಲಭ್ಯಗಳನ್ನು ಕೊಡಲಾಗದ ಸರ್ಕಾರವನ್ನು ನಾವು ನೋಡಿದ್ದೇವೆ.

ಜನರಿಗೆ ಎಲ್ಲವೂ ಗೊತ್ತಿದೆ ಎಂಬುದು ಇದೀಗ ಇತರೆ ರಾಜಕೀಯ ಪಕ್ಷಗಳ ನಾಯಕರು ತಿಳಿದುಕೊಳ್ಳಬೇಕಿದೆ.  ಮುಂದಿನ ದಿನಗಳಲ್ಲಿ ಕೇದಾರನಾಥ, ಬದ್ರಿನಾಥ್ ಯಾತ್ರೆಗೆ ಬರುವ ಜನರು ನಮ್ಮ ಸರ್ಕಾರವನ್ನು ಹಾಗೂ ನಿತಿನ್ ಗಡ್ಕರಿಯವರನ್ನು ನೆನೆಯುತ್ತಾರೆಂಬ ಭರವಸೆಯನ್ನು ನಾನು ನೀಡುತ್ತೇನೆ.

ಪ್ರವಾಸೋದ್ಯವೇ ಉತ್ತರಾಖಂಡದ ದೊಡ್ಡ ಆಸ್ತಿಯಾಗಿದ್ದು, ಅಗತ್ಯ ಸೌಲಭ್ಯಗಳನ್ನು ನೀಡಿದ್ದೇ ಆದರೆ, ಯಾರು ಉತ್ತರಖಾಂಡ ರಾಜ್ಯಕ್ಕೆ ಬರುವುದಿಲ್ಲ ಎನ್ನುತ್ತಾರೆ? ಚಾರ್ ಧಾಮ್ ಹೆದ್ದಾರಿ ಯೋಜನೆ ಉತ್ತರಾಖಂಡದಲ್ಲಿರುವ ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಲಿದೆ.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ 18,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ನಮ್ಮ ಸರ್ಕಾರ ಈ ಕೆಲಸವನ್ನು ಮಾಡಿದೆ. 1000 ದಿನಗಳಲ್ಲಿ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಒದಗಿಸಬೇಕೆಂದು ನಾವು ನಿರ್ಧಾರ ಕೈಗೊಂಡೆವು. ಈಗಾಗಲೇ 12,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ.

60 ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರ ಈ ಮಟ್ಟಕ್ಕೆ ಕೆಲಸ ಮಾಡಿರಲಿಲ್ಲ. ಇದೀಗ ನೋಡಿ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು. ನಮ್ಮ ಸರ್ಕಾರ ಬಡವರಿಗೆ ಸಮರ್ಪಣೆಗೊಂಡಿದೆ.

ನಮ್ಮ ದೇಶದ ಯೋಧರ ಕಳೆದ 40 ವರ್ಷಗಳಿಂದಲೂ ಸಮಾನ ವೇತನ ಮತ್ತು ಸಮಾನ ಪಿಂಚಣಿಗಾಗಿ ಹೋರಾಟ ನಡೆಸುತ್ತಿದ್ದರು. ಯೋಧರ ಆಗ್ರಕ್ಕೆ ಅಂದಿನ ಆಡಳಿತಾರೂಢ ಸರ್ಕಾರ ಕಿವಿ ಕೊಟ್ಟಿರಲಿಲ್ಲ. ನಮ್ಮ ಯೋಧರಿಗೆ ನಾನು ಸೆಲ್ಯೂಟ್ ಹೊಡೆಯುತ್ತಿದ್ದೇನೆ. ರು.6,600 ಕೋಟಿ ಹಣವನ್ನು ಈಗಾಗಲೇ ಸಮಾನ ವೇತನ ಮತ್ತು ಸಮಾನ ಪಿಂಚಣಿ ಅಡಿಯಲ್ಲಿ ಯೋಧರಿಗೆ ನೀಡಲಾಗಿದೆ.

ಈ ಹಿಂದಿನ ಸರ್ಕಾರ ತಮ್ಮ ಬಜೆಟ್ ನಲ್ಲಿ ರು.500 ಕೋಟಿ ಹಣವನ್ನು ಮೀಸಲಿಟ್ಟಿತ್ತು. ಆದರೆ, ನಮ್ಮ ಸರ್ಕಾಸ ಸಮಾನ ವೇತನ ಮತ್ತು ಸಮಾನ ಪಂಚಣಿಗಾಗಿಯೇ ರು.10,000 ಹಣವನ್ನು ಮೀಸಲಿರಿಸಿದೆ. ಯೋಧರಿಗೆ ಸಿಗಬೇಕಿರುವ ಹಣವನ್ನು ನೀಡಲು ನಾವು ನಿರ್ಧರಿಸಿದ್ದೇವೆ. ಇದಕ್ಕೆ ಉದಾಹರಣೆಯೇ ಒಆರ್ ಒಪಿ.

ನೀವು ನನ್ನನ್ನು ಕಾವಲುಗಾರನಾಗಿ ನೇಮಿಸಿದ್ದೀರ. ಇದೀಗ ಕೆಲವರಿಗೆ ಅದು ಸಮಸ್ಯೆಯಾಗಿ ಎದುರಾಗಿದೆ. ನಾನು ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ. ಕಪ್ಪುಹಣ ದೇಶವನ್ನು ನಾಶ ಮಾಡಿದೆ. ನಾವು ಕಪ್ಪುಹಣದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನೋಟು ನಿಷೇಧದಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿರುವುದು ನನಗೆ ಗೊತ್ತಿದೆ. ಸಮಸ್ಯೆಗಳ ಮಧ್ಯೆಯೂ ಜನರು ಭ್ರಷ್ಟಾಚಾರದ ವಿರುದ್ದ ಹೋರಾಡಲು ಮುಂದಾಗಿದ್ದಾರೆ.

ಅಧಿಕಾರಕ್ಕೆ ಬಂದಲಾಗ ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳುತ್ತೀವೆಂದು ಹೇಳಿದ್ದೆವು. ಇದೀಗ ಏನಾಗುತ್ತಿದೆ ಎಂಬುದನ್ನು ನೀವೇ ನೋಡಿ. ಇದೊಂದು ಸಫಾಯಿ ಅಭಿಯಾನವಾಗಿದೆ. ನಮ್ಮ ಅಭಿಯಾನಕ್ಕೆ ದೇಶದ ಜನತೆಯೇ ಸಹಾಯ ಮಾಡಿದ್ದಾರೆ. ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ ಬಳಿಕ ನಕಲಿ ನೋಟು ಬಳಕೆದಾರರು, ಭಯೋತ್ಪಾದಕ ಚಟುವಟಿಕೆಗಳು ಹಾಗೂ ಮಾನವ ಕಳ್ಳರಸಾಗಣೆ, ಡ್ರಗ್ ಮಾಫಿಯಾಗಳ ಭಾರೀ ಹೊಡತ ಬಿದ್ದಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com