ಪ್ರತೀ ಪೈಸೆಗೂ ನಮ್ಮ ಬಳಿ ದಾಖಲೆಯಿದೆ: ರು.104 ಕೋಟಿ ಕುರಿತು ಮಾಯಾವತಿ ಸಮರ್ಥನೆ

ನೋಟು ನಿಷೇಧದ ಬಳಿಕ ಬಹುಜನ ಸಮಾಜ ಪಕ್ಷದ ಖಾತೆಯಲ್ಲಿ ರು.104 ಕೋಟಿ ಹಣ ಜಮೆಯಾಗಿರುವುದನ್ನು ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸಮರ್ಥಿಸಿಕೊಂಡಿದ್ದು, ಪ್ರತೀ ಪೈಸೆಗೂ ನಮ್ಮ ಬಳಿ ದಾಖಲೆಯಿದೆ ಎಂದು ಮಂಗಳವಾರ ಹೇಳಿದ್ದಾರೆ...
ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ
ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ

ನವದೆಹಲಿ: ನೋಟು ನಿಷೇಧದ ಬಳಿಕ ಬಹುಜನ ಸಮಾಜ ಪಕ್ಷದ ಖಾತೆಯಲ್ಲಿ ರು.104 ಕೋಟಿ ಹಣ ಜಮೆಯಾಗಿರುವುದನ್ನು ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸಮರ್ಥಿಸಿಕೊಂಡಿದ್ದು, ಪ್ರತೀ ಪೈಸೆಗೂ ನಮ್ಮ ಬಳಿ ದಾಖಲೆಯಿದೆ ಎಂದು ಮಂಗಳವಾರ ಹೇಳಿದ್ದಾರೆ.

ನೋಟು ನಿಷೇಧದ ಬಳಿಕ ಭಾರಿ ಮೊತ್ತದ ಹಣ ಜಮೆಯಾಗಿರುವ ಬ್ಯಾಂಕ್ ಖಾತೆಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಿಎಸ್ ಪಿ ಹಾಗೂ ಆನಂದ್ ಅವರ ಖಾತೆಗಳಿಗೆ ದೊಡ್ಡ ಮೊತ್ತದ ಹಣ ಜಮೆಯಾಗಿರುವುದು ಪತ್ತೆಯಾಗಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದರು.

ಈ ಹಿನ್ನಲೆಯಲ್ಲಿ ಲಖನೌನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಉತ್ತರಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ವರ್ಚಸ್ಸನ್ನು ಹಾಳು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನೋಟು ನಿಷೇಧದ ಬಳಿಕ ಪಕ್ಷದ ಖಾತೆಗೆ ಜಮೆಯಾಗಿರುವ ಪ್ರತೀ ಪೈಸೆಗೂ ನಮ್ಮ ಬಳಿ ದಾಖಲೆಗಳಿವೆ. ಆದರೆ, ಬಿಜೆಪಿ ಖಾತೆಗಳ ವಿಚಾರವೇನು? ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಜಕ್ಕೂ ಪ್ರಾಮಾಣಿಕರೇ ಆಗಿದ್ದರೆ, ಬಿಜೆಪಿ ಪಕ್ಷದ ಖಾತೆಯಲ್ಲಿರುವ ಹಣದ ಕುರಿತು ಸಾರ್ವಜನಿಕವಾಗಿ ಘೋಷಣೆ ಮಾಡಲಿ. ಎಲ್ಲವೂ ಬಹಿರಂಗವಾಗಲಿ ಎಂದು ಹೇಳಿದ್ದಾರೆ.

ಪಕ್ಷದ ಖಾತೆ ಕಾನೂನಾತ್ಮಕವಾಗಿದ್ದು, ಜನರು ನೀಡಿರುವ ಚಂದಾ ಹಣವನ್ನು ಕಾನೂನಾತ್ಮಕವಾಗಿಯೇ ಪಕ್ಷದ ಖಾತೆಗೆ ಜಮಾ ಮಾಡಲಾಗಿದೆ. ಜಮೆಯಾಗಿರುವ ಎಲ್ಲಾ ಹಣವೂ ಪಕ್ಷಕ್ಕೆ ಸೇರಿದ್ದು. ಪ್ರತೀ ಪೈಸೆಗೂ ನಮ್ಮ ಬಳಿ ದಾಖಲೆಗಳಿವೆ. ಅಧಿಕಾರಿಗಳನ್ನು ಬಳಸಿಕೊಂಡು ಬಿಜೆಪಿ ಪಕ್ಷದ ವರ್ಚಸ್ಸನ್ನು ಹಾಳು ಮಾಡಲು ಯತ್ನಿಸುತ್ತಿದೆ.

ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿಗೊಳ್ಳುವಂತೆ ಬಿಜೆಪಿ ಒತ್ತಡ ಹೇರುತ್ತಿದೆ ಎಂಬ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಬಿಜೆಪಿ ನಡುಕ ಉಂಟಾಗಿದೆ. ಹೀಗಾಗಿಯೇ ಈ ರೀತಿಯಾಗಿ ನಮ್ಮ ಮೇಲೆ ಹಗೆ ಸಾಧಿಸುತ್ತಿದೆ. ನೋಟು ನಿಷೇಧ ನಮಗೆ ಲಾಭವೇ ಆಗಿದೆ. ಬಿಜೆಪಿ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದುವರೆಸಿದ್ದೇ ಆದರೆ, ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಗೆಲವು ಸಾಧಿಸಲಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯವರು ದಲಿತ ವಿರೋಧಿ ಮನಸ್ಥಿತಿಯುಳ್ಳವರಾಗಿದ್ದು, ನಾನು ದಲಿತಳಾಗಿದ್ದರಿಂದಾಗಿ ನನ್ನ ಗುರಿ ಮಾಡುತ್ತಿದ್ದಾರೆ. ದೇಶದಲ್ಲಿರುವ ಶೇ.90 ರಷ್ಟು ಜನರ ಮೇಲೆ ದೌರ್ಜನ್ಯವೆಸಗುವುದು ಬಿಜೆಪಿಗೆ ಬೇಕಿದ್ದು, ರಾಜವಂಶ ಹಾಗೂ ಬಂಡವಾಳಶಾಹಿಗೆ ಅಂತ್ಯ ಹಾಡುವುದು ಅವರಿಗೆ ಬೇಕಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com