ನೋಟು ನಿಷೇಧಕ್ಕೆ 50 ದಿನ; ಸಂಪೂರ್ಣ ಗ್ರಹಿಕೆಗೆ ಸಿಗದ ಅನಾಣ್ಯೀಕರಣದ ಪ್ರಯೋಜನ!

ಬ್ಯಾಂಕ್ ಅಧಿಕಾರಿಗಳು ಪ್ರಧಾನಿ ಬೆನ್ನಿಗೆ ಚೂರಿ ಹಾಕಿದ ಬ್ಯಾಂಕ್ ಅಧಿಕಾರಿಗಳ ಭ್ರಷ್ಟತನದ ಹಲಾವು ಪ್ರಕರಣಗಳು ಈ 50 ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳು.
ನೋಟು ನಿಷೇಧಕ್ಕೆ 50 ದಿನ; ಸಂಪೂರ್ಣ ಗ್ರಹಿಕೆಗೆ ಸಿಗದ ಅನಾಣ್ಯೀಕರಣದ ಪ್ರಯೋಜನ!
ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ನಿಷೇಧಿಸಿ ಇಂದಿಗೆ (ಡಿ.30ಕ್ಕೆ) 50 ದಿನಗಳಾದವು. ನಗದುಬಿಕ್ಕಟ್ಟಿನಿಂದಾಗಿ ಜನಸಾಮಾನ್ಯರು ಅನುಭವಿಸಿದ ಒಂದಷ್ಟು ಸಮಸ್ಯೆ, 2000  ರೂ ನೋಟುಗಳನ್ನು ಬಂಡಲ್ ಗಟ್ಟಲೆ ಜೋಡಿಸಿಟ್ಟಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ಅವರಿಗೆ ಸಹಾಯ ಮಾಡಿ ಪ್ರಧಾನಿ ಬೆನ್ನಿಗೆ ಚೂರಿ ಹಾಕಿದ ಬ್ಯಾಂಕ್ ಅಧಿಕಾರಿಗಳ ಭ್ರಷ್ಟತನದ ಹಲಾವು ಪ್ರಕರಣಗಳು ಈ 50 ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳು. 
ಈ ವರೆಗೂ 500-1000 ರೂ ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲು ಅವಕಾಶ ಇತ್ತು. ಆದರೆ ಇಂದಿನಿಂದ 500-1000 ರೂ ನೋಟುಗಳು  ಬ್ಯಾಂಕ್ ಗಳಲ್ಲೂ ಅಕ್ಷರಸಹ ವರ್ಜ್ಯ. ನೋಟು ನಿಷೇಧದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ 50 ದಿನಗಳಲ್ಲಿ ಜನರ ಸಮಸ್ಯೆಗಳೆಲ್ಲವೂ ಪರಿಹಾರವಗುತ್ತದೆ ನಗದು ಬಿಕ್ಕಟ್ಟಿಗೆ ತೆರೆ ಬೀಳುತ್ತದೆ ಎಂಬ ಅರ್ಥದಲ್ಲಿ ಭರವಸೆ ನೀಡಿದ್ದರು. ಆದರೆ 50 ದಿನಗಳು ಕಳೆದರೂ ಸಹ ಬಹುತೇಕ ಎಟಿಎಂ ಗಳಲ್ಲಿ ಇನ್ನೂ ನೋ ಕ್ಯಾಷ್ ಬೋರ್ಡ್ ರಾರಾಜಿಸುತ್ತಿವೆ. ಈ ನಿಟ್ಟಿನಲ್ಲಿ ನೋಟು ನಿಷೇಧದಿಂದ ಉಂಟಾದ ಸಮಸ್ಯೆಗಳು ಹಾಗೂ ಪ್ರಯೋಜನಗಳ ಸ್ಥೂಲ ಚಿತ್ರಣ ಇಲ್ಲಿದೆ. 
ಆರ್ಥಿಕತೆ 
ಮೇಲಿನ
 ಪರಿಣಾಮ
ನೋಟು ನಿಷೇಧ ಹಲವು ವಿಧಗಳಲ್ಲಿ ದೀರ್ಘಾವದಿಯ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಕೇಂದ್ರ ಸರ್ಕಾರದ ಘೋಷಣೆಯ ಪ್ರಾರಂಭದಲ್ಲೇ ವಿಶ್ಲೇಷಿಸಲಾಗಿತ್ತು. ಅಂತೆಯೇ ಆರ್ಥಿಕತೆ ಮೇಲೂ ಸಹ ಪರಿಣಾಮ ಬೀರಿದೆ. ಆದರೆ ಆರ್ಥಿಕತೆ ಮೇಲೆ ನೋಟು ನಿಷೇಧದ ನಿಖರವಾದ ಪರಿಣಾಮವನ್ನು ತಿಳಿಯಬೇಕಾದರೆ ಸರ್ಕಾರ ಮುಂದಿನ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ಘೋಷಿಸಿದಾಗ ಮಾತ್ರ ಸಾಧ್ಯವಾಗಲಿದೆ. 
ದೇಶೀಯ ವಾಣಿಜ್ಯ ವಹಿವಾಟುಗಳು ಆರ್ಥಿಕ ಚಟುವಟಿಕೆಯನ್ನು ಚಾಲನೆ ಮಾಡುವುದರಿಂದ ವಿಶ್ಲೇಷಕರು, ತಜ್ಞರ ಪ್ರಕಾರ ಆರ್ಥಿಕ ಹಾಗೂ ಸಾಮಾಜಿಕವಾಗಿ ನೋಟು ನಿಷೇಧದ ಪರಿಣಾಮ ತುಸು ಹೆಚ್ಚಾಗಿಯೇ ಇರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ನೋಟು ನಿಷೇಧದಿಂದ ಅತಿ ಹೆಚ್ಚು ಕುಗ್ಗಿರುವುದೆಂದರೆ ಅವು ರಿಯಲ್ ಎಸ್ಟೇಟ್, ಪ್ರವಾಸೋದ್ಯಮ, ಸಾರಿಗೆ ಹಾಗೂ ಚಿನ್ನಾಭರಣಕ್ಕೆ ಸಂಬಂಧಿಸಿದ ಕ್ಷೇತ್ರಗಳು.   
ನೋಟು ನಿಷೇಧ ಅಸ್ತವ್ಯಸ್ತ ನಿಯಮಗಳು
ನೋಟು ನಿಷೇಧದ ನಂತರ ಕಪ್ಪುಹಣ ಬ್ಯಾಂಕ್ ನಲ್ಲಿ ಠೇವಣಿಯಾಗುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವಾಲಯ ಬರೊಬ್ಬರಿ 60 ವಿವಿಧ ರೀತಿಯ ನಿರ್ದೇಶನ, ನಿಯಮಗಳನ್ನು ಜಾರಿಗೆ ತಂದಿತ್ತು. ಇದರಿಂದ ಹಲವು ಬಾರಿ ಗೊಂದಲಗಳೂ ಉಂಟಾಗಿತ್ತು. ಪರಿಣಾಮವಾಗಿ ಹೂಡಿಕೆದಾರರಲ್ಲಿನ ವಿಶ್ವಾಸವೂ ಸಹ ಕುಗ್ಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. 
ಭಾರತದ ನೋಟು ನಿಷೇಧ ಜಾಗತಿಕ ಟ್ರೆಂಡ್! 
ಭಾರತ ಕಪ್ಪುಹಣಕ್ಕೆ ಕಡಿವಾಣ ಹಾಕಲು ನೋಟು ನಿಷೇಧದ ಕ್ರಮ ಕೈಗೊಂಡ ಬೆನ್ನಲ್ಲೇ ವೆನಿಜುವೆಲಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಆಂತರಿಕವಾಗಿ ಸಂಗ್ರಹವಾಗಿದ್ದ ಕಪ್ಪುಹಣವನ್ನು ಹೊರತೆಗೆಯಲು ಭಾರತದ ನಡೆಯನ್ನೇ ಅನುಸರಿಸಲು ಪ್ರಾರಂಭಿಸಿದವು. ಆದರೆ ವೆನಿಜುವೆಲಾದಲ್ಲಿ ಅಲ್ಲಿನ ಜನರಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೋಟು ನಿಷೇಧ ಯಶಸ್ವಿಯಾಗಲಿಲ್ಲ.
ಇನ್ನು ಭಾರತದ ನಕಲಿ ರೂಪಾಯಿ ನೋಟುಗಳನ್ನು ಮುದ್ರಿಸುತ್ತಿದ್ದ ಪಾಕಿಸ್ತಾನದಲ್ಲೂ ಸಹ 5000 ಪಾಕಿಸ್ತಾನಿ ರೂ ನೋಟು ಸೇರಿದಂತೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಬೇಕೆಂಬ ಒತ್ತಾಯ ಸಂಸದರಿಂದಲೇ ಕೇಳಿಬಂದಿತ್ತು. ಈ ಬಗ್ಗೆ ಸಂಸತ್ ನಲ್ಲಿ ನಿರ್ಣಯವನ್ನೂ ಅಂಗೀಕರಿಸಲಾಗಿತ್ತು. 
ನೋಟು ನಿಷೇಧದ ಯಶಸ್ಸನ್ನು ಈಗಲೇ ನಿಖರವಾಗಿ ಹೇಳುವುದು ಕಷ್ಟ 
ಈ ಎಲ್ಲಾ ಬೆಳವಣಿಗೆಗಳ ನಡುವೆ ನೋಟು ನಿಷೇಧದ ಕ್ರಮದ ಯಶಸ್ಸನ್ನು ಈಗಲೇ ನಿಖರವಾಗಿ ಹೇಳುವುದು ಕಷ್ಟ ಸಾಧ್ಯ, ಕಪ್ಪುಹಣ ತಡೆಗಿಂತ ಹೆಚ್ಚಾಗಿ ನೋಟು ನಿಷೇಧದಿಂದ ಭಯೋತ್ಪಾದಕರ ಅರ್ಥಿಕತೆ ಹಾಗೂ ನಕಲಿ ನೋಟುಗಳಿಗೆ ಕಡಿವಾಣ ಬಿದ್ದಿದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com