ಭಗವಾನ್ ರಾಮ-ಲಕ್ಷ್ಮಣ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತ

ಭಾರತದಲ್ಲಿ ದೈವ ಪ್ರತಿರೂಪವಾಗಿ ನೋಡುತ್ತಿರುವ ರಾಮ ಹಾಗೂ ಲಕ್ಷ್ಮಣ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ಜಿಲ್ಲಾ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಸೀತಾಮಹ್ರಿ: ಭಾರತದಲ್ಲಿ ದೈವ ಪ್ರತಿರೂಪವಾಗಿ ನೋಡುತ್ತಿರುವ ರಾಮ ಹಾಗೂ ಲಕ್ಷ್ಮಣ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ಜಿಲ್ಲಾ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮ ತನ್ನ ಪತ್ನಿಯಾದ ಸೀತೆಯನ್ನು ತ್ಯಜಿಸಿರುವುದು ನ್ಯಾಯಯುತವಲ್ಲ ಎಂದು ದೂರಿದ್ದ ವ್ಯಕ್ತಿಯೊಬ್ಬರು ರಾಮನ ವಿರುದ್ಧವೇ ನಿನ್ನೆ ದೂರೊಂದನ್ನು ಸೀತಾಮಹ್ರಿ ಎಂಬಲ್ಲಿ ದಾಖಲಿಸಿದ್ದರು. ವಕೀಲ ಚಂದನ್ ಕುಮಾರ್ ಸಿಂಗ್ ಎಂಬವರು ಬಿಹಾರದ ಸಿವಿಲ್ ಕೋರ್ಟ್ ನಲ್ಲಿ ಭಗವಾನ್ ರಾಮ ಹಾಗೂ ಆತನ ಸಹೋದರ ಲಕ್ಷ್ಮಣನ ವಿರುದ್ಧ ದೂರು ದಾಖಲಿಸಿದ್ದರು.

ಪ್ರಸಿದ್ಧ ರಾಮಾಯಣ ಕಥೆಯಲ್ಲಿ ಆಗಸನೊಬ್ಬನ ಮಾತನ್ನು ಕೇಳಿದ್ದ ಶ್ರೀರಾಮ ಸೀತಾ ಮಾತೆಯನ್ನು ಕಾಡಿಗೆ ಕಳುಹಿಸಿ, ಆಕೆಯನ್ನು ತ್ಯಜಿಸಿದ್ದು ಸರಿಯಾದ ನಿರ್ಧಾರವಲ್ಲ. ಆಗಸನೊಬ್ಬನ ಮಾತನ್ನು ಕೇಳಿ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆಯೇ ರಾಮನು ಸೀತೆಯನ್ನು ಕಾಡಿಗಟ್ಟಿರುವುದು ತಪ್ಪು ಎಂದು ದೂರಿನಲ್ಲಿ ಆರೋಪಿಸಿದ್ದರು. ಅಲ್ಲದೆ, ಈ ವಿಷಯದಲ್ಲಿ ಸಹೋದರ ಲಕ್ಷ್ಮಣ ಕೂಡ ಅಣ್ಣನಾದ ರಾಮನಿಗೆ ಸಾಥ್ ನೀಡಿದ್ದ ಎಂದು ದೂರಿನಲ್ಲಿ ಹೇಳಲಾಗಿತ್ತು.

ಇದೀಗ ಅರ್ಜಿಯನ್ನು ಪರಿಶೀಲಿಸಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಷ್ ಬಿಹಾರಿ ಅವರು, ಅರ್ಜಿಯನ್ನು ತಿರಸ್ಕರಿಸಿದ್ದು, ಅರ್ಜಿ ಸಲ್ಲಿಸುವ ಚಂದನ್ ಕುಮಾರ್ ಅವರು ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆಂದು ಅವರ ವಿರುದ್ಧ ಈಗಾಗಲೇ ಮತ್ತೊಂದು ನ್ಯಾಯಾಲಯದಲ್ಲಿ ಮೂರು ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು, ಸಲ್ಲಿಕೆಯಾಗಿರುವ ಅರ್ಜಿ ಸಮರ್ಥನೀಯವಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಕುರಿತ ಮತ್ತಷ್ಟು ವಿಚಾರಣೆಗಾಗಿ ಮತ್ತೊಂದು ನ್ಯಾಯಾಲಯಕ್ಕೆ ಅರ್ಜಿಯನ್ನು ವರ್ಗಾಯಿಸಿದ್ದಾರೆ.

ಅರ್ಜಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅರ್ಜಿದಾರ ಚಂದನ್ ಕುಮಾರ್ ಅವರು, ರಾಮ, ಲಕ್ಷ್ಮಣ ವಿರುದ್ಧ ದೂರು ದಾಖಲಿಸಿದ್ದಕ್ಕಾಗಿ ಈಗಾಗಲೇ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಭದ್ರತೆ ಕುರಿತಂತೆ ಪೊಲೀಸ್ ಅಧಿಕಾರಿ ಹರಿ ಪ್ರಸಾದ್ ಅವರ ಬಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com