ತಪಾಸಣೆಗೆ ಬೇಸತ್ತ ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ಹೇಳಿದ

ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ಸರಣಿ ಭದ್ರತಾ ತಪಾಸಣೆಯಿಂದಾಗಿ ಬೇಸತ್ತಿದ್ದ ಪ್ರಯಾಣಿನೋರ್ವ, ವಿಮಾನದಲ್ಲಿ ಬಾಂಬ್ ಎಂದು ಸುಳ್ಳು ವದಂತಿ ಹಬ್ಬಿಸಿರುವ ಘಟನೆಯೊಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ಸರಣಿ ಭದ್ರತಾ ತಪಾಸಣೆಯಿಂದಾಗಿ ಬೇಸತ್ತಿದ್ದ ಪ್ರಯಾಣಿನೋರ್ವ, ವಿಮಾನದಲ್ಲಿ ಬಾಂಬ್ ಎಂದು ಸುಳ್ಳು ವದಂತಿ ಹಬ್ಬಿಸಿರುವ ಘಟನೆಯೊಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದಿದೆ.

ದೆಹಲಿಯಿಂದ ಚೆನ್ನೈಗೆ ಜೆಟ್ ಏರ್ ವೇಸ್ ನ ವಿಮಾನ 9w-821 ವಿಮಾನ ಹೊರಟಿತ್ತು. ಈ ವೇಳೆ ನಿಲ್ದಾಣದಲ್ಲಿ ಸಿಬ್ಬಂದಿಗಳು ಸರಣಿ ಭದ್ರತಾ ತಪಾಸಣೆ ನಡೆಸುತ್ತಿದ್ದರು. ಇದರಿಂದ ಬೇಸತ್ತ ಪ್ರಯಾಣಿಕನೊಬ್ಬ ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ವದಂತಿಯೊಂದನ್ನು ಹಬ್ಬಿಸಿದ್ದಾನೆ. ಇದರಿಂದಾಗಿ ವಿಮಾನ ನಿಲ್ಧಾಣದಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವಾರಣ ನಿರ್ಮಾಣವಾಗಿತ್ತು.

ಈ ವದಂತಿಯಿಂದಾಗಿ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಗಳು ಪ್ರಿಯಾಂಕಾ ವಾದ್ರಾ ಅವರು ಅನಿವಾರ್ಯವಾಗಿ ಪ್ರಯಾಣವನ್ನು ರದ್ದು ಮಾಡಬೇಕಾದ ಪರಿಸ್ಥಿತಿ ಬಂದೊದಗಿತ್ತು.

ಇಷ್ಟಕ್ಕೂ ಏನಿದು ಘಟನೆ
ವಿಮಾನದಲ್ಲಿ ಪ್ರಯಾಣಿಸಲು ಸಿದ್ಧನಿದ್ದ ಉದ್ಯಮಿಯೊಬ್ಬನ ಬ್ಯಾಗ್ ನ್ನು ಸಿಬ್ಬಂದಿಗಳು ಪದೇ ಪದೇ ತಪಾಸಣೆ ನಡೆಸಿದ್ದಾರೆ. ಈಗಾಗಲೇ 2 ಬಾರಿ ತಪಾಸಣೆ ಮಾಡಿದ್ದ ಸಿಬ್ಬಂದಿಗಳು ಮತ್ತೆ ಮೂರನೇ ಬಾರಿಯೂ ತಪಾಸಣೆ ಮಾಡಲು ಬ್ಯಾಗ್ ತೆಗೆಯುವಂತೆ ಹೇಳಿದ್ದಾರೆ. ಹೀಗಾಗಿ ತಪಾಸಣೆಯಿಂದ ಬೇಸತ್ತಿದ್ದ ಉದ್ಯಮಿ ತಾನು ಬಾಂಬ್ ಕೊಂಡೊಯ್ಯುತ್ತಿದ್ದು, ವಿಮಾನವನ್ನು ಸ್ಪೋಟಿಸಲು ಸಂಚು ರೂಪಿಸಿದ್ದೇನೆಂದು ಸಿಬ್ಬಂದಿಗಳ ಬಳಿ ಸುಳ್ಳು ಹೇಳಿದ್ದಾನೆ.

ಪ್ರಯಾಣಿಕನ ಈ ಮಾತನ್ನು ಕೇಳಿದ ಸಿಬ್ಬಂದಿಗಳು ಕೂಡಲೇ ವಿಮಾನದಲ್ಲಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿ ಭದ್ರತಾ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆದು ಬ್ಯಾಗ್ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಬ್ಯಾಗ್ ನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿರಲಿಲ್ಲ. ಹೀಗಾಗಿ ಉದ್ಯಮಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಂದಿದೆ. ನಿಲ್ದಾಣದಲ್ಲಿ ನಡೆದ ರಾದ್ದಾಂತದಿಂದ ಬೇಸತ್ತಿದ್ದ ಸೋನಿಯಾ ಹಾಗೂ ಅವರ ಮಗಳು ಪ್ರಿಯಾಂಕಾ ಮತ್ತೊಂದು ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com