
ನವದೆಹಲಿ: ಪಠಾಣ್ ಕೋಟ್ ಸೇನಾ ವಾಯು ನೆಲೆ ಮೇಲಿನ ಉಗ್ರರ ದಾಳಿ ಬಳಿಕ ಗಂಭೀರ ಹೆಜ್ಜೆ ಇಡುತ್ತಿರುವ ಕೇಂದ್ರ ಸರ್ಕಾರ ಅಕ್ರಮ ನುಸುಳುಕೋರರಿಗೆ ಕಂಡಲ್ಲಿ ಗುಂಡಿಡಲು ಆದೇಶ ನೀಡಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ಮಾಧ್ಯಮ ಮೂಲಗಳ ಪ್ರಕಾರ, ಪಶ್ಚಿಮ ವಲಯದಲ್ಲಿರುವ ಸೇನಾ ವಾಯುನೆಲೆಗಳು ಮತ್ತು ಗಡಿ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸುವ ನುಸುಳುಕೋರರ ವಿರುದ್ಧ ಯಾವುದೇ ರೀತಿಯ ಮುಲಾಜಿಲ್ಲದೇ ಕಂಡಲ್ಲಿ ಗುಂಡು ಹಾರಿಸಲು ಆದೇಶ ನೀಡಲಾಗಿದೆ. ಈ ಬಗ್ಗೆ ಸೇನಾ ಹಿರಿಯ ಆಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದಲ್ಲದೇ ಭಾರತದ ಗಡಿ ಪ್ರದೇಶಗಳನ್ನು ಭದ್ರ ಪಡಿಸಲು ಅತ್ಯಾಧುನಿಕ ಮಾರ್ಗಗಳನ್ನು ಅನುಸರಿಸಲು ಕೇಂದ್ರ ರಕ್ಷಣಾ ಇಲಾಖೆ ನಿರ್ಧರಿಸಿದ್ದು, ಇದಕ್ಕೆ ಸುಮಾರು 8000 ಕೋಟಿ ರು. ವೆಚ್ಚ ತಗುಲುತ್ತದೆ ಎಂದು ಹೇಳಲಾಗುತ್ತಿದೆ.
ಭಾರತೀಯ ವಾಯುಪಡೆ ನೆಲೆಗಳ ಸುತ್ತಮುತ್ತ ಸ್ಮಾರ್ಟ್ ಬೇಲಿಗಳ ಅಳವಡಿಕೆ, ವೈಬ್ರೇಷನ್ ಪತ್ತೆ ವ್ಯವಸ್ಥೆ, ಮಿನಿ ಡ್ರೋಣ್ಗಳು ಮತ್ತು ಥರ್ಮಲ್ ಕ್ಯಾಮೆರಾಗಳನ್ನು ಅಳವಡಿಸುವ ಪ್ರಕ್ರಿಯೆ ಕೂಡ ಇದರಲ್ಲಿ ಸೇರಿದೆ. ಅಲ್ಲದೆ ತಲಾ 1000 ಸಿಬ್ಬಂದಿಯನ್ನು ಒಳಗೊಂಡ 10 ಹೆಚ್ಚುವರಿ ಗರುಡಾ ಕಮಾಂಡೋ ತುಕಡಿಗಳನ್ನು ರಾಷ್ಟ್ರಾದ್ಯಂತ 950 ನೆಲೆಗಳ ಸಂರಕ್ಷಣೆಗಾಗಿ ನಿಯೋಜನೆ ಮಾಡುವ ವಿಚಾರವೂ ಯೋಜನೆಯಲ್ಲಿ ಸೇರಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಅಕ್ರಮವಾಗಿ ಗಡಿ ಪ್ರವೇಶಿಸಿದ್ದ ಉಗ್ರರು ಪಠಾಣ್ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿ 7 ಮಂದಿ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದರು. ನಾಲ್ಕು ದಿನಗಳ ಸತತ ಕಾರ್ಯಾಚರಣೆ ಬಳಿಕ ದಾಳಿ ಮಾಡಿದ್ದ ಎಲ್ಲ ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿತ್ತು.
Advertisement