
ನವದೆಹಲಿ: ಡಿಡಿಸಿಎ ಪ್ರಕರಣದಲ್ಲಿ ಅನಗತ್ಯವಾಗಿ ಕೇಜ್ರಿವಾಲ್ ಮತ್ತು ಅವರ ಸಂಗಡಿಗರ ನನ್ನ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಡಿಡಿಸಿಎ ಅಧ್ಯಕ್ಷ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.
ಕೇಜ್ರಿವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನಿಮಿತ್ತ ಇಂದು ದೆಹಲಿ ಹೈಕೋರ್ಟ್ ಗೆ ಆಗಮಿಸಿದ ಅರುಣ್ ಜೇಟ್ಲಿ ಅವರು ವಿಚಾರಣೆ ವೇಳೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಐವರು ಸಂಗಡಿಗರು ತಮ್ಮ ವಿರುದ್ಧ ಬಹಳ ಲೆಕ್ಕಾಚಾರದ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರವನ್ನೇ ನಡೆಸಿದ ಅವರು ರಹಸ್ಯ ಉದ್ದೇಶಗಳನ್ನಿಟ್ಟುಕೊಂಡು ರಾಜಕೀಯವಾಗಿ ಬೆಳೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಅಭವ್ಯಕ್ತಿ ಸ್ವಾತಂತ್ರ್ಯ ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಆದರೆ ಯಾವುದೇ ವ್ಯಕ್ತಿ ಅದನ್ನು ತನ್ನ ಸ್ವಹಿತಾಸಕ್ತಿ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು. ಒಂದು ವೇಳೆ ಯಾರ ವಿರುದ್ಧವಾದರೂ ಅಪಪ್ರಚಾರ ಮಾಡಿದರೆ ಅದನ್ನು ಎದುರಿಸುವ ಅಥವಾ ಅದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಜೇಟ್ಲಿ ಹೇಳಿದರು.
ಈ ಹಿಂದೆ ಡಿಡಿಸಿಎಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಅರುಣ್ ಜೇಟ್ಲಿ ಅವರ ಪಾತ್ರವೂ ಇದೆ ಎಂದು ಆರೋಪಿಸಿದ್ದ ಆಮ್ ಆದ್ಮಿ ಪಕ್ಷ ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ಮಾಡಿತ್ತು. ಈ ಹಿನ್ನಲೆಯಲ್ಲಿ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ವಿರುದ್ಧ ಕೇಜ್ರಿವಾಲ್ ಹಾಗೂ ಸಹಚರರು, ಸುಳ್ಳು ಆರೋಪ ಮಾಡುತ್ತಿದ್ದಾರೆ. ಡಿಡಿಸಿಎ ಹಗರಣದಲ್ಲಿ ವಿನಾಕಾರಣ ತಮ್ಮ ಕುಟುಂಬದವರ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‍ನಲ್ಲಿ ಕೇಜ್ರಿವಾಲ್ ಸೇರಿದಂತೆ ಐವರು ಆಪ್ ಮುಖಂಡರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Advertisement