ಕೊಲೆಗಡುಕ 17 ವರ್ಷದ ಬಾಲಕನನ್ನು ವಯಸ್ಕ ಎಂದು ಪರಿಗಣಿಸಬಹುದೇ?

ದೆಹಲಿಯಲ್ಲಿ ಈ ವಾರ ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ಸಿಕ್ಕಿಬಿದ್ದ 17 ವರ್ಷದ ಬಾಲಕನನ್ನು ಕೇಂದ್ರ ಸರ್ಕಾರ ಡಿಸೆಂಬರ್ ನಲ್ಲಿ...
ಆರೋಪಿ ಬಾಲಕ ತನ್ನ ಸ್ನೇಹಿತೆಯೊಂದಿಗೆ, ಬಲಚಿತ್ರದಲ್ಲಿ ಕೊಲೆಗೀಡಾಗ ವೃದ್ಧೆ ಮೈತಿಲೇಶ್ ಜೈನ್
ಆರೋಪಿ ಬಾಲಕ ತನ್ನ ಸ್ನೇಹಿತೆಯೊಂದಿಗೆ, ಬಲಚಿತ್ರದಲ್ಲಿ ಕೊಲೆಗೀಡಾಗ ವೃದ್ಧೆ ಮೈತಿಲೇಶ್ ಜೈನ್

ನವದೆಹಲಿ: ದೆಹಲಿಯಲ್ಲಿ ಈ ವಾರ ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ಸಿಕ್ಕಿಬಿದ್ದ 17 ವರ್ಷದ ಬಾಲಕನನ್ನು ಕೇಂದ್ರ ಸರ್ಕಾರ ಡಿಸೆಂಬರ್ ನಲ್ಲಿ ಅಂಗೀಕರಿಸಿದ ನೂತನ ಕಾನೂನಿನ ಪ್ರಕಾರ ವಯಸ್ಕ ಎಂದು ಪರಿಗಣಿಸುವ ಸಾಧ್ಯತೆಯಿದೆ.

ಬಾಲಾಪರಾಧ ನ್ಯಾಯ ಮಂಡಳಿ ಒಪ್ಪಿದರೆ ಕಳೆದ ಆರು ತಿಂಗಳಿನಲ್ಲಿ ಎರಡು ಕೊಲೆ ಮಾಡಿದ ಈ ಬಾಲಕನನ್ನು ಬಾಲಾಪರಾಧಿಗಳ ಕಾಯ್ದೆ 2015ರಡಿ ದಾಖಲಿಸಲಾಗುತ್ತಿರುವ ಮೊದಲ ಕೇಸು ಆಗಿದೆ. ಕೇಂದ್ರ ಸರ್ಕಾರದ ಹೊಸ ಕಾನೂನಿನ ಪ್ರಕಾರ, ಕೊಲೆಯಂತಹ ಗಂಭೀರ ಅಪರಾಧ ಎಸಗಿದ 16ರಿಂದ 18 ವರ್ಷ ವಯಸ್ಸಿನವರನ್ನು ವಯಸ್ಕರು ಎಂದು ಪರಿಗಣಿಸಲಾಗುತ್ತದೆ.

ಇದೇ 17 ವರ್ಷದ ಬಾಲಕ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 13 ವರ್ಷದ ಬಾಲಕನನ್ನು ಅಪಹರಿಸಿ ಕೊಂದು ಹಾಕಿದ್ದನು. ಅವನನ್ನು ನಡತೆ ತಿದ್ದಿಕೊಳ್ಳಲು ಬಾಲಗೃಹಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಎರಡು ತಿಂಗಳಲ್ಲಿ ಸನ್ನಡತೆ ತೋರಿಸಿದ್ದಕ್ಕಾಗಿ ಹೊರಬಂದಿದ್ದನು. ಆದರೆ ಮೊನ್ನೆ ಸೋಮವಾರ ದಕ್ಷಿಣ ದೆಹಲಿಯ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 65 ವರ್ಷದ ವೃದ್ಧೆ ಮೈತಿಲೇಶ್ ಜೈನ್ ಎಂಬುವವರನ್ನು ಕತ್ತು ಹಿಸುಕಿ ಕೊಲೆ ಮಾಡಿ, ಹಣ, ಚಿನ್ನಾಭರಣ, ಮೊಬೈಲ್ ಫೋನ್ ಗಳೊಂದಿಗೆ ಪರಾರಿಯಾಗಿದ್ದಾನೆ.
ಕದ್ದ ಮೊಬೈಲನ್ನು ಸ್ವಿಚ್ ಆನ್ ಮಾಡಿ ಬಳಸುತ್ತಿದ್ದಾಗ ಪೊಲೀಸರು ಅವನನ್ನು ಪತ್ತೆಹಚ್ಚಿದ್ದಾರೆ. ಆರೋಪಿಯು ದೆಹಲಿ ಸಮೀಪ ಫರಿದಾಬಾದ್ ನ ಅವನ ನಿವಾಸದಲ್ಲಿ ನಿನ್ನೆ ಸಿಕ್ಕಿಬಿದ್ದಿದ್ದಾನೆ.

ವೃತ್ತಿಪರ ಡ್ಯಾನ್ಸರ್ ಆಗಿರುವ ಈತ ಪೊಲೀಸರು ವಿಚಾರಣೆಗೊಳಪಡಿಸಿದಾಗ ತಾನು ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಲು ಹಣಕ್ಕಾಗಿ ಈ ಎರಡೂ ಕೊಲೆಗಳನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಈ ಬಾಲಕ ಮತ್ತು ಅವನ ಸ್ನೇಹಿತೆ ಕಳೆದ ವರ್ಷ 13 ವರ್ಷದ ಬಾಲಕನನ್ನು ಅಪಹರಿಸಿ ಉತ್ತರಾಖಂಡ್ ನ ರಾಣಿಕೇತ್ ಗೆ ಕರೆದುಕೊಂಡು ಹೋಗಿ ಬೆಲ್ಟ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿ ಬಂಡೆಯೊಂದರ ಕೆಳಗೆ ದೇಹವನ್ನು ಎಸೆದು ಪರಾರಿಯಾಗಿದ್ದರು.

ಕೇಂದ್ರ ಸರ್ಕಾರದ ಹೊಸ ಬಾಲಾಪರಾಧ ಕಾನೂನನ್ನು ಕಾಂಗ್ರೆಸ್ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ತಹ್ಸೀನ್ ಪೂನವಲ್ಲಾ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಈ ಕಾನೂನು ಅತ್ಯಂತ ಕಠಿಣವಾಗಿದ್ದು, ಅಸಂವಿಧಾನಿಕವಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com