ಭೂ ಹಗರಣ ವಿವಾದ: ಆನಂದಿಬೆನ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಗಿರ್ ಸಿಂಹಗಳ ಅಭಯಾರಣ್ಯ ವನದ ಬಳಿ ವಿವಾದಾತ್ಮಕ ಭೂಮಿ ಹಂಚಿಕೆಗೆ ಸಂಬಂಧಪಟ್ಟಂತೆ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್...
ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್
ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್
Updated on

ಅಹಮದಾಬಾದ್: ಗಿರ್ ಸಿಂಹಗಳ ಅಭಯಾರಣ್ಯ ವನದ ಬಳಿ ವಿವಾದಾತ್ಮಕ ಭೂಮಿ ಹಂಚಿಕೆಗೆ ಸಂಬಂಧಪಟ್ಟಂತೆ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಒತ್ತಡ ಹೇರುತ್ತಿದೆ.
ಸಾರ್ವಜನಿಕ ಭೂಮಿಯನ್ನು ಸ್ವಜನಪಕ್ಷಪಾತದಿಂದ ತಮ್ಮವರಿಗೆ ಹಂಚಿಕೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರಣವಾಗಿದ್ದಾರೆ ಮತ್ತು ಈ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ನಿಸ್ಪಕ್ಷಪಾತ ತನಿಖೆ ನಡೆಸಬೇಕೆಂದು ಅದು ಒತ್ತಾಯಿಸಿದೆ.

2010ನೇ ಇಸವಿಯಲ್ಲಿ ಗುಜರಾತ್ ನ ಬಿಜೆಪಿ ಸರ್ಕಾರ ಗಿರ್ ಸಿಂಹ ಅಭಯಾರಣ್ಯದ ಪಕ್ಕದಲ್ಲಿರುವ 250 ಎಕರೆ ಭೂಮಿಯನ್ನು ಪ್ರತಿ ಚದರಡಿಗೆ 15 ರೂಪಾಯಿಯಂತೆ ಪ್ರತಿ ಎಕರೆಗೆ 60 ಸಾವಿರ ರೂಪಾಯಿಯಂತೆ ವೈಲ್ಡ್ ವುಡ್ ರೆಸಾರ್ಟ್ ಮತ್ತು ರಿಯಾಲ್ಟಿ ಕಂಪೆನಿಗೆ ಮಾರಾಟ ಮಾಡಿತ್ತು. ರೆಸಾರ್ಟ್ ಕಟ್ಟುವ ಉದ್ದೇಶದಿಂದ ಭೂಮಿಯನ್ನು ಖರೀದಿಸಿದ್ದು ಅಲ್ಲಿ ಇನ್ನೂ ರೆಸಾರ್ಟ್ ತಲೆಯೆತ್ತಬೇಕಿದೆ. ಸುಮಾರು 125 ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರ ಕೇವಲ ಒಂದೂವರೆ ಕೋಟಿ ರೂಪಾಯಿಗೆ ಮಾರಾಟ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಆರೋಪಿಸಿದ್ದಾರೆ.

ಪರಿಸರ ಸೂಕ್ಷ್ಮ ವಲಯದಲ್ಲಿರುವ ಸಾರ್ವಜನಿಕ ಭೂಮಿಯನ್ನು ಮಾರಾಟ ಮಾಡಲಾಗಿದ್ದು, ಇಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಅಸಲಿಗೆ ಈ ಪ್ರಕರಣ ಬೆಳಕಿಗೆ ಬಂದದ್ದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾದಾಗ. ವೈಲ್ಡ್ ವುಡ್ ಕಂಪೆನಿಯ ಮೂಲ ಪ್ರಾಯೋಜಕ ಸಂಜಯ್ ಧನಾಕ್. ಅವರು 2011-12ರಲ್ಲಿ ಕಂಪೆನಿಯನ್ನು ದಕ್ಷೇಶ್ ಶಾ ಮತ್ತು ಅಮೋಲ್ ಸೇತ್ ಎಂಬುವವರಿಗೆ ಹಸ್ತಾಂತರಿಸಿದ್ದರು. ಅವರು ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರ ಪುತ್ರಿ ಅನಾರ್ ಪಟೇಲ್ ಅವರ ಉದ್ಯಮಿ ಪಾಲುದಾರರು.

ಹಿನ್ನಲೆ: 2010-11ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆನಂದಿ ಬೆನ್ ಪಟೇಲ್ ಕಂದಾಯ ಸಚಿವರಾಗಿದ್ದರು. ಆಗ ಭೂಮಿ ಹಸ್ತಾಂತರ, ಮಾರಾಟದ ವಿಷಯಗಳು ಆನಂದಿ ಬೆನ್ ಪಟೇಲ್ ಅವರೇ ನೋಡಿಕೊಳ್ಳುತ್ತಿದ್ದರು. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಆನಂದಿಬೆನ್ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾದರು. ಕಂದಾಯ ಖಾತೆಯನ್ನು ಅವರೇ ಉಳಿಸಿಕೊಂಡರು.

ಆರೋಪ ಅಲ್ಲಗಳೆದ ಬಿಜೆಪಿ: ಕಾಂಗ್ರೆಸ್ ನ ಆಪಾದನೆಯನ್ನು ಗುಜರಾತ್ ನ ಬಿಜೆಪಿ ಅಲ್ಲಗಳೆದಿದೆ. ಯಾವಾಗಲೂ ಮಾಧ್ಯಮಗಳ ಮುಂದೆ ರಾರಾಜಿಸುವ ಹಂಬಲ ಕಾಂಗ್ರೆಸ್ ಗೆ.ಹಾಗಾಗಿ ಇಲ್ಲಸಲ್ಲದ ಆರೋಪ ಮಾಡಿ ಸುದ್ದಿಯಾಗಲು ಬಯಸುತ್ತಿದೆ. ಆನಂದಿ ಬೆನ್ ಅವರು ನಿರ್ಮಲ ಮನಸ್ಸಿನವರಾಗಿದ್ದು, ಅವರು ಹಾಗೆಯೇ ಉಳಿಯುತ್ತಾರೆ. ಭೂಮಿ ಮಾರಾಟದಲ್ಲಿ ಎಲ್ಲಾ ಕಾನೂನು ಕ್ರಮಗಳನ್ನು ಅನುಸರಿಸಲಾಗಿದೆ ಎನ್ನುತ್ತಾರೆ ರಾಜ್ಯ ಬಿಜೆಪಿ ವಕ್ತಾರ ಐಕೆ ಜಡೇಜಾ.

ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರತಿಕ್ರಿಯೆ ನೀಡಿರುವ ಅನಾರ್ ಪಟೇಲ್, ತಾವು ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಕುಟುಂಬದವರ ಅವಶ್ಯಕತೆಗಳನ್ನು ಪೂರೈಸಲು ಉದ್ಯಮಕ್ಕೆ ಕಾಲಿಟ್ಟಿರುವುದಾಗಿ ಹೇಳಿದ್ದಾರೆ.

'' ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ನೈತಿಕತೆಯಿಂದ ಉದ್ಯಮ ಮಾಡುವುದು ಪ್ರತಿಯೊಬ್ಬರ ಹಕ್ಕು ಆಗಿರುತ್ತದೆ. ಇದುವರೆಗೆ ನಾನು ಮಾಡಿರುವ ಕೆಲಸವನ್ನು ವಿಶ್ವಾಸಾರ್ಹತೆಯಿಂದ ಮಾಡಿದ್ದೇನೆ. ಒಬ್ಬರ ನೈತಿಕತೆ ಪ್ರಶ್ನಿಸಿ ತೀರ್ಮಾನ ತೆಗೆದುಕೊಳ್ಳುವವರನ್ನು ನೋಡಿದಾಗ ನಿಜಕ್ಕೂ ನೋವಾಗುತ್ತದೆ. ಸತ್ಯಕ್ಕೆ ಯಾವಾಗಲೂ ಜಯವಿದೆ'' ಎಂದು ಅನಾರ್ ಪಟೇಲ್ ಫೇಸ್ ಬುಕ್ ನಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com