

ನವದೆಹಲಿ: ಕಾಣೆಯಾಗಿದ್ದಾಳೆನ್ನಲಾಗುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ದೇಹ ಇದೀಗ ಆಕೆಯ ಗೆಳೆಯನ ಮನೆಯಲ್ಲೇ ದೊರಕಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅರ್ಜೂ ಸಿಂಗ್ ಕೊಲೆಯಾಗಿರುವ ವಿದ್ಯಾರ್ಥಿಯಾಗಿದ್ದು, ಈಕೆ ಲಕ್ಷ್ಮೀ ಬಾಯಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯನ್ನು ಮಾಡುತ್ತಿದ್ದಳು. ಎಂದಿನಂತೆ ಫೆ.2ರಂದು ಕಾಲೇಜಿಗೆ ಹೋಗಿದ್ದ ಅರ್ಜೂಸಿಂಗ್ ಎಷ್ಟು ಹೊತ್ತಾದರೂ ಮನೆಗೆ ಬಾರದಿರುವುದರಿಂದ ಪೋಷಕರು ದೂರು ದಾಖಲಿಸಿದ್ದರು.
ಅರ್ಜೂ ಸಿಂಗ್ ಈ ಹಿಂದೆ ನವೀನ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದು, ಇಬ್ಬರು ಮದುವೆಯಾಗುವುದಾಗಿ ಮನೆಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಎರಡೂ ಕುಟುಂಬದವರು ಮದುವೆ ವಿರೋಧ ವ್ಯಕ್ತಪಡಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಅರ್ಜೂಸಿಂಗ್ ಕಾಣೆಯಾಗಿದ್ದಳು. ಇದೀಗ ಅರ್ಜೂಸಿಂಗ್ ದೇಹ ಆಕೆಯ ಗೆಳಯ ನವೀನ್ ಮನೆಯಲ್ಲೇ ದೊರಕಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಘಟನೆ ಕುರಿತಂತೆ ಮಾತನಾಡಿರುವ ಅರ್ಜೂಸಿಂಗ್ ಸಹೋದರಿ ಆಕಾಂಕ್ಷಾ, ನವೀನ್ ಮತ್ತು ಅರ್ಜೂ ಇಬ್ಬರು ಪ್ರೀತಿ ಮಾಡುತ್ತಿದ್ದರು. ಈ ವಿಚಾರವನ್ನು ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಎರಡೂ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ವಿರೋಧದ ನಡುವೆಯೂ ನವೀನ್ ಪ್ರತಿನಿತ್ಯ ಅರ್ಜೂಳನ್ನು ಭೇಟಿ ಮಾಡುತ್ತಿದ್ದ. ಕೆಲವು ದಿನಗಳ ಬಳಿಕ ನವೀನ್ ಗೆ ಆತನ ಕುಟುಂಬದವರು ಮದುವೆಯನ್ನು ನಿಶ್ಚಯ ಮಾಡಿದ್ದರು. ಫೆ.4 ರಂದು ಆತನ ಮದುವೆಯಿತ್ತು. ಮದುವೆಗೆ ನನ್ನ ಅಕ್ಕ ಸಮಸ್ಯೆಯಾಗಬಾರದು ಎಂದು ನವೀನ್ ಪೋಷಕರು ನಮ್ಮ ಬಳಿ ಮಾತನಾಡಿದ್ದರು. ಇದಕ್ಕೆ ನಮ್ಮ ಪೋಷಕರು ಸಮ್ಮತಿ ನೀಡಿದ್ದರು ಎಂದು ಹೇಳಿಕೊಂಡಿದ್ದಾಳೆ.
ಇದೀಗ ಘಟನೆ ಹಿಂದೆ ನವೀನ್ ಪಾತ್ರವಿರುವುದಾಗಿ ಅರ್ಜೂ ಪೋಷಕರು ಆರೋಪಿಸುತ್ತಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ಆರೋಪ ವ್ಯಕ್ತಪಡಿಸುತ್ತಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.