
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸುವಂತೆ ಕೋರಿ ಆಮ್ ಆದ್ಮಿ ಪಕ್ಷದ ವಕ್ತಾರ ದೀಪಕ್ ಬಾಜಪೇಯಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಜೇಟ್ಲಿ ಅವರು ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಯಾವುದೇ ರೀತಿಯ ನಿರ್ದಿಷ್ಟ ಕಾರಣಗಳನ್ನು ಕೊಟ್ಟಿಲ್ಲ ಹೀಗಾಗಿ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಮತ್ತು ಪ್ರಕರಣ ಸಂಬಂಧ ಕನಿಷ್ಠ ಮೂರು ವಾರಗಳ ಸಮಯಾವಕಾಶ ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.
ಇದರಂತೆ ಇಂದು ನಡೆದ ವಿಚಾರಣೆ ವೇಳೆ ದೀಪಕ್ ಬಾಜಪೇಯಿ ಅವರ ಪರ ವಕೀಲ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇಂದೊಂದು ಸುಳ್ಳು ಮೊಕದ್ದಮೆಯಾಗಿದ್ದು, ಮೊಕದ್ದಮೆಯಲ್ಲಿ ಮಾನನಷ್ಟಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಹೀಗಾಗಿ ಮೊಕದ್ದಮೆಯನ್ನು ರದ್ದು ಪಡಿಸುವಂತೆ ಹೇಳಿದರು.
ನಂತರ ವಾದ ಮಂಡಿಸಿದ ಜೇಟ್ಲಿ ಪರ ವಕೀಲ ರಾಜೀವಿ ನಾಯರ್, ದೂರಿನಲ್ಲಿ ದೀಪಕ್ ಬಾಜಪೇಯಿ ಅವರು ವ್ಯಕ್ತಿಗತ ಹಾಗೂ ಪಕ್ಷದ ನಾಯಕರ ಜೊತೆಗೂಡಿ ಮಾನನಷ್ಟವಾಗುವಂತಹ ಹೇಳಿಕೆಗಳನ್ನು ನೀಡಿದ್ದಾರೆಂದು ನನ್ನ ಕಕ್ಷಿದಾರರು ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು. ಇಬ್ಬರ ವಾದ ಹಾಗೂ ಪ್ರತಿವಾದಗಳನ್ನು ಕೇಳಿದ ನ್ಯಾಯಾಧೀಶ ವಿಪಿನ್ ಸಿಂಘಿ ಅವರಿದ್ದ ಪೀಠ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ಹಿಂದೆ ಡಿಡಿಸಿಎಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಅರುಣ್ ಜೇಟ್ಲಿ ಅವರ ಪಾತ್ರವೂ ಇದೆ ಎಂದು ಆರೋಪಿಸಿದ್ದ ಆಮ್ ಆದ್ಮಿ ಪಕ್ಷ ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ಮಾಡಿತ್ತು. ಈ ಹಿನ್ನಲೆಯಲ್ಲಿ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ವಿರುದ್ಧ ಕೇಜ್ರಿವಾಲ್ ಹಾಗೂ ಸಹಚರರು, ಸುಳ್ಳು ಆರೋಪ ಮಾಡುತ್ತಿದ್ದಾರೆ. ಡಿಡಿಸಿಎ ಹಗರಣದಲ್ಲಿ ವಿನಾಕಾರಣ ತಮ್ಮ ಕುಟುಂಬದವರ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‍ನಲ್ಲಿ ರು.10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Advertisement