
ಚಂಡೀಗಢ: ಮಾನವರು ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸೌಂದರ್ಯ ಸ್ಪರ್ಧೆಗಳಿಗೆ ಇದೀಗ ಗೋವುಗಳೂ ಕಾಲಿಟ್ಟಿದ್ದು, ಹರಿಯಾಣದಲ್ಲಿ ನಡೆಯಲಿರುವ ರ್ಯಾಂಪ್ ವಾಕ್ ನಲ್ಲಿ ಗೋವುಗಳು ಕ್ಯಾಟ್ ವಾಕ್ ಮಾಡಲಿವೆ.
ಹೌದು, ಉತ್ತಮ ದೇಶಿ ತಳಿಯ ಗೋವುಗಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಹರಿಯಾಣ ಸರ್ಕಾರ ಈ ರೀತಿಯ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಗೋವುಗಳು ರ್ಯಾಂಪ್ ವಾಕ್ ಮಾಡಲಿವೆ. ಇದೇ ಫೆ.27 ಮತ್ತು 28ರಂದು ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಗೆದ್ದ ಹಸುವಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ.
ಈಗಾಗಲೇ ಗೋಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಹರಿಯಾಣ ಸರ್ಕಾರ ಇದೀಗ ಗೋವುಗಳ ಕುರಿತಂತೆ ಅರಿವು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಗೋವುಗಳ ರ್ಯಾಂಪ್ ಕೂಡ ಇದರಲ್ಲಿ ಒಂದು ಕಾರ್ಯಕ್ರಮವಾಗಿದೆ.
ಸ್ಪರ್ಧೆ ಆಯೋಜನೆ ಕುರಿತಂತೆ ಮಾತನಾಡಿರುವ ಪಶುಸಂಗೋಪನೆ ಸಚಿವ ಓಂ ಪ್ರಕಾಶ್ ಧನ್ಕರ್ ಅವರು, ಸ್ಪರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷ ಬಹುಮಾನವನ್ನು ನೀಡಲಾಗುತ್ತದೆ. ಸ್ಪರ್ಧೆಗೆ ಪ್ರಾಯೋಜಕರು ಸಿಕ್ಕಿದ್ದೇ ಆದರೆ, ಬಹುಮಾನದ ಹಣವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಸ್ಪರ್ಧೆಯು ವಿವಿಧ ರೀತಿಯ ಹಂತಗಳಲ್ಲಿ ನಡೆಯಲಿದ್ದು, ದೇಶಿ ತಳಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
Advertisement