
ಮೈದುಗುರಿ: ನೈಜೀರಿಯಾದಲ್ಲಿ 2 ಮಹಿಳಾ ಆತ್ಮಹತ್ಯಾ ಬಾಂಬರ್ ಗಳು ತಮ್ಮನ್ನು ತಾವೇ ಸ್ಪೋಟಿಸಿಕೊಂಡ ಪರಿಣಾಮ 58 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಮೈದುಗುರಿಯಲ್ಲಿನ ಡಿಕ್ವಾ ಪ್ರದೇಶದಲ್ಲಿ ನೈಜೀರಿಯಾ ಜನರಿಗಾಗಿ ನಿರಾಶ್ರಿತರ ಶಿಬಿರವೊಂದನ್ನು ಏರ್ಪಡಿಸಲಾಗಿದ್ದು, ಶಿಬಿರದಲ್ಲಿ ಸಾವಿರಾರು ಮಂದಿ ಆಶ್ರಯವನ್ನು ಪಡೆದಿದ್ದರು. ಈ ವೇಳೆ ನಿನ್ನೆ ಸಂಜೆ ಶಿಬಿರಕ್ಕೆ ಬಂದ ಮೂವರು ಮಹಿಳಾ ಬಾಂಬರ್ ಗಳಲ್ಲಿ ಇಬ್ಬರು ಮಹಿಳೆಯರು ಇದ್ದಕ್ಕಿದ್ದಂತೆ ತಾವು ತೊಟ್ಟಿಕೊಂಡಿದ್ದ ಅತ್ಮಾಹುತಿ ಬಾಂಬ್ ಗಳನ್ನು ಸ್ಫೋಟಿಸಿಕೊಂಡಿದ್ದಾರೆ.
ನಂತರ ಮೂರನೇ ಮಹಿಳಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಳ್ಳುವ ವೇಳೆ ಶಿಬಿರದಲ್ಲಿ ತನ್ನ ಕುಟುಂಬದವರು ಇರುವುದನ್ನು ನೋಡಿದ್ದಾಳೆ. ಈ ವೇಳೆ ಕುಟುಂಬದವರನ್ನು ನೋಡಿ ಕಂಬನಿ ಮಿಡಿದ ಮಹಿಳೆ ಸ್ಫೋಟಿಸಿಕೊಳ್ಳಲು ಸಾಧ್ಯವಾಗದೆ ಅಧಿಕಾರಿಗಳ ಬಳಿ ಶರಣಾಗಿದ್ದಾಳೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಂಬ್ ಸ್ಫೋಟದ ಪರಿಣಾದ ಇದೀಗ 58 ಮಂದಿ ಸಾವನ್ನಪ್ಪಿದ್ದು, 78 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ತುರ್ತು ಸೇವಾ ಸಿಬ್ಬಂದಿಗಳು ಈಗಾಗದಲೇ 53,600 ಮಂದಿಯನ್ನು ಸಂರಕ್ಷಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕಳುಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆ ಕುರಿತಂತೆ ಮಾತನಾಡಿರುವ ನೈಜೀರಿಯಾ ಉಪ ರಾಷ್ಟ್ರಪತಿ ಯೆಮಿ ಒಸಿನ್ಬಾಜೊ ಅವರು, ರಾಷ್ಟ್ರಪತಿ ಮುಹಮ್ಮದು ಬಹುರಿಯವರು ರಜೆಯಲ್ಲಿದ್ದಾರೆ. ಆತ್ಮಾಹುತಿ ದಾಳಿ ನಿಜಕ್ಕೂ ದುರ್ಘಟನೆಯಾಗಿದ್ದು, ಹೃದಯಹೀನ ಉಗ್ರರು ಅಸಹಾಯಕ ಜನರ ಪ್ರಾಣವನ್ನು ತೆಗೆದಿದ್ದಾರೆ. ದಾಳಿ ಹಿಂದೆ ಇರುವವರನ್ನು ಕಂಡು ಹಿಡಿದು ಅವರ ವಿರುದ್ಧ ಸರ್ಕಾರ ಕಠಿಣ ಕೈಗೊಳ್ಳಲಿದೆ. ಇದು ನನ್ನ ಭಾಷೆ ಎಂದು ಹೇಳಿದ್ದಾರೆ. ಭದ್ರತೆ ಕುರಿತಂತೆ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದ್ದು, ಎಲ್ಲಾ ಶಿಬಿರಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.
Advertisement