

ನವದೆಹಲಿ: 6 ವರ್ಷಗಳ ಹಿಂದೆ ಚುನಾವಣಾ ಆಯೋಗಕ್ಕೆ 6.5 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದ ಬಿಎಸ್ಪಿಯ ಮಾಜಿ ವಿಧಾನಪರಿಷತ್ ಸದಸ್ಯ ಮೊಹಮ್ಮದ್ ಇಕ್ಬಾಲ್, ಇದೀಗ 10 ಸಾವಿರ ಕೋಟಿ ರೂ. ಕಪ್ಪು ಹಣ ಹೊಂದಿರುವ ಆರೋಪಕ್ಕೆ ಸಿಲುಕಿದ್ದಾರೆ.
ಸುಪ್ರೀಂಕೋರ್ಟ್‌ಗೆ ಈ ಸಂಬಂಧ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ, ಮೊಹಮ್ಮದ್ ಇಕ್ಬಾಲ್ ಅವರ ವಿರುದ್ಧದ ಕಪ್ಪು ಹಣ ಗಳಿಕೆ ಆರೋಪ ಕುರಿತು ವಿವಿಧ ತನಿಖಾ ಸಂಸ್ಥೆಗಳಿಂದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇಕ್ಬಾಲ್ ಅವರು 10 ಸಾವಿರ ಕೋಟಿ ರೂ. ಕಪ್ಪು ಹಣ ಗಳಿಸಿದ್ದು, ಅದನ್ನು ಸಕ್ರಮ ಗೊಳಿಸಿಕೊಳ್ಳಲು 111 ನಕಲಿ ಕಂಪನಿಗಳನ್ನು ದೇಶ ಹಾಗೂ ವಿದೇಶಗಳಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಸ್ಥಾಪಿಸಿದ್ದಾರೆ. ಬಳಿಕ ಅದರಿಂದ ತಮಗೆ ಕೋಟ್ಯಂತರ ರೂ. ಲಾಭ ಹೊಂದಿದೆ ಎಂದು ಬಿಂಬಿಸುತ್ತಿದ್ದಾರೆ ಎಂದು ರಣವೀರ್ ಸಿಂಗ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.