ಪ್ರಧಾನಿ ಮೋದಿ ಮೌನಕ್ಕೆ ಮನಮೋಹನ್ ಸಿಂಗ್ ವ್ಯಂಗ್ಯ

ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕಿದ್ದರೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರೊಂದಿಗಿನ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ...
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ (ಸಂಗ್ರಹ ಚಿತ್ರ)
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ (ಸಂಗ್ರಹ ಚಿತ್ರ)
ನವದೆಹಲಿ: ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕಿದ್ದರೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರೊಂದಿಗಿನ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ. 
ಪ್ರಧಾನಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಇದೇ ಮೊದಲ ಬಾರಿಗೆ ಖಾಸಗಿ ಆಂಗ್ಲ ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿರುವ ಅವರು, ಕಳೆದ ವರ್ಷ ಸಂಸತ್ತು ಅಧಿವೇಶನ ನಡೆಯುವುದಕ್ಕೂ ಮೊದಲು ಮೋದಿಯವರು ನನ್ನನ್ನು ಭೇಟಿಯಾಗಿದ್ದರು. ಈ ವೇಳೆ ರಾಷ್ಟ್ರಕ್ಕೆ ಸಂಬಂಧಿತ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯಲು ಹಾಗೂ ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕಿದ್ದರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರೊಂದಿಗೆ ಉತ್ತಮ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವಂತೆ ಮೋದಿಯವರಿಗೆ ಈ ಹಿಂದೆ ಸಲಹೆ ನೀಡಿದ್ದೆ. ಸೋನಿಯಾ ಹಾಗೂ ರಾಹುಲ್ ಅವರು ಪಕ್ಷದ ಶಕ್ತಿಯುತ ನಾಯಕರಾಗಿದ್ದಾರೆ. ಸೋನಿಯಾ, ರಾಹುಲ್ ಗೆ ವಿರುದ್ಧವಾಗಿ ಕಾಂಗ್ರೆಸ್ ಯಾವುದೇ ಹೆಜ್ಜೆಯನ್ನಿಡುವುದಿಲ್ಲ ಎಂದು ಹೇಳಿದ್ದಾರೆ. 
ನಂತರ ಅಸಹಿಷ್ಣುತೆ, ಗೋಮಾಂಸ ವಿವಾದ ಕುರಿತಂತೆ ಪ್ರಧಾನಿ ಮೋದಿಯವರು ಮೌನವಾಗಿರುವುದನ್ನು ವ್ಯಂಗ್ಯವಾಡಿರುವ ಅವರು, ಸಾರ್ವಜನಿಕವಾಗಿ ವ್ಯಕ್ತವಾಗುವ ಅಭಿಪ್ರಾಯಗಳ ಮೇಲೆ ಪ್ರಧಾನಿಯವರು ತಮ್ಮ ನಿಲುವು ವ್ಯಕ್ತಪಡಿಸಬೇಕೆಂದು ದೇಶದ ಜನತೆ ಅಪೇಕ್ಷಿಸುತ್ತಾರೆ. ಅದು ಗೋಮಾಂಸ ವಿವಾದವೇ ಇರಬಹುದು. ಅಥವಾ ಮುಜಾಫರ್ ನಗರದ ಘಟನೆಯೇ ಇರಬಹುದು. ಅದರೆ ಮೋದಿಯವರು ಈ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಲೇಇಲ್ಲ. 
ಮೋದಿಯವರು ಯಾವ ಕಾರಣಕ್ಕಾಗಿ ಮೌನವಹಿಸಿದ್ದರೆಂಬುದು ತಿಳಿಯಲಿಲ್ಲ. ಅವರ ಮನಸ್ಸಿನಲ್ಲೇನಿದೆ ಎಂಬು ಅರ್ಥವಾಗಿಲ್ಲ. ಆದರೆ ಅವರು ಈ ದೇಶದ ಪ್ರಧಾನಮಂತ್ರಿ. ನಮ್ಮ ಒಳಿತಿನ ಬಗ್ಗೆ ಪ್ರಧಾನಿ ಯೋಚಿಸುತ್ತಾರೆಂಬ ಭಾವನೆಯನ್ನು ಪ್ರತಿಯೊಬ್ಬರಲ್ಲೂ ಹುಟ್ಟಿಸಬೇಕು ಎಂದು ಸಲಹೆ ನೀಡಿದ್ದಾರೆ. 
ಇದೇ ವೇಳೆ ಆರ್ಥಿಕ ಅಭಿವೃದ್ಧಿಯನ್ನು ಟೀಕಿಸಿರುವ ಅವರು, ಮೋದಿ ಅವರ ಆಡಳಿತದಲ್ಲಿ ದೇಶದ ಆರ್ಥಿಕತೆ ಯಾವ ಪ್ರಮಾಣದಲ್ಲಿ ಪ್ರಗತಿ ಆಗಬೇಕಿತ್ತೋ ಅಷ್ಟು ಬೆಳವಣಿಗೆ ಆಗಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಇದ್ದ ಪರಿಸ್ಥಿತಿಗಿಂತ ಪ್ರಸ್ತುತ ಇರುವ ವಾತಾವರಣ ಅನುಕೂಲಕರವಾಗಿದೆ. ಯುಪಿಎ ಸರ್ಕಾರದ ಅಧಿಕಾರದಲ್ಲಿದ್ದಾಗ ತೈಲ ಬೆಲೆ ಬ್ಯಾರಲ್ ಗೆ ಡಾಲರ್ ಗೆ 150 ಡಾಲರ್ ಮುಟ್ಟಿತ್ತು. ಇದೀಗ ಡಾಲರ್ ಗೆ 30ಕ್ಕೆ ಕುಸಿದಿದೆ. ಇದರಿಂದ ಆರ್ಥಿಕ ಕೊರತೆ ಸರಿದೂಗಿಸಬಹುದಾಗಿದೆ. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಬಹುದು ಎಂದು ಹೇಳಿದ್ದಾರೆ. 
ನಂತರ ಪಾಕಿಸ್ತಾನದೊಂದಿನ ಸಂಬಂಧ ಕುರಿತಂತೆ ಮಾತನಾಡಿರುವ ಅವರು, ಸರ್ಕಾರ ಪಾಕಿಸ್ತಾನದೊಂದಿಗೆ ವ್ಯವಹರಿಸುತ್ತಿರುವುದು ಅಸಮಂಜಸವಾಗಿದೆ. ಕಳೆದ ವರ್ಷ ಮೋದಿಯವರ ಲಾಹೋರ್ ಪ್ರವಾಸ ಸರಿಯಾದುದಲ್ಲ. ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧದಲ್ಲಿರುವುದು ಬಹುಮುಖ್ಯ. ಆದರೆ, ಉತ್ತಮ ಬಾಂದವ್ಯದಲ್ಲಿದ್ದೇವೆಂದು ಸುಖಭ್ರಮೆಯಲ್ಲಿರುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com