4 ಗುಂಡೇಟು ತಿಂದಿದ್ದ ಪಠಾಣ್ ಕೋಟ್ ಯೋಧ ಮತ್ತೆ ಸಮರಕ್ಕೆ ಸಿದ್ಧನಾದ

ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದಿದ್ದ ಉಗ್ರರ ದಾಳಿ ವೇಳೆ ಬರೋಬ್ಬರಿ 4 ಗುಂಡೇಟು ತಿಂದಿದ್ದ ಭಾರತೀಯ ಯೋಧ ಶೈಲಭ್ ಗೌರ್ ಅವರು ಮತ್ತೆ ಕರ್ತವ್ಯಗೆ ಹಾಜರಾಗಲು ತುದಿಗಾಲಲ್ಲಿ ನಿಂತಿದ್ದಾರೆ..
ಪಠಾಣ್ ಕೋಟ್ ದಾಳಿ ವೇಳೆ ಗುಂಡೇಟು ತಿಂದಿದ್ದ ಯೋಧ ಶೈಲಭ್ ಗೌರ್ (ಸಂಗ್ರಹ ಚಿತ್ರ)
ಪಠಾಣ್ ಕೋಟ್ ದಾಳಿ ವೇಳೆ ಗುಂಡೇಟು ತಿಂದಿದ್ದ ಯೋಧ ಶೈಲಭ್ ಗೌರ್ (ಸಂಗ್ರಹ ಚಿತ್ರ)

ಅಂಬಾಲ: ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದಿದ್ದ ಉಗ್ರರ ದಾಳಿ ವೇಳೆ ಬರೋಬ್ಬರಿ 4 ಗುಂಡೇಟು ತಿಂದಿದ್ದ ಭಾರತೀಯ ಯೋಧ ಶೈಲಭ್ ಗೌರ್ ಅವರು ಮತ್ತೆ ಕರ್ತವ್ಯಗೆ ಹಾಜರಾಗಲು ತುದಿಗಾಲಲ್ಲಿ ನಿಂತಿದ್ದಾರೆ.

ಕಳೆದ ಜನವರಿ 2ರಂದು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಉಗ್ರರು ನಡೆಸಿದ್ದ ದಾಳಿ ವೇಳೆ ಗುಂಡೇಟು ತಿಂದು ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರುಡಾ ತಂಡದ ಕಮಾಂಡೋ ಕಾರ್ಪೋರಲ್ ಶೈಲಭ್ ಗೌರ್ ಅವರು ಗುಣಮುಖರಾಗಿದ್ದು, ಮತ್ತೆ ಕರ್ತವ್ಯ ನಿರ್ವಹಣೆಗೆ ಸಿದ್ಧರಾಗಿದ್ದಾರೆ. ಉಗ್ರರಿಂದ 4 ಗುಂಡೇಟು ತಿಂದಿದ್ದ ಗೌರ್ ಸತತ ಎರಡೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಉಗ್ರ ದಾಳಿ ವೇಳೆ ಗೌರ್ ಪ್ರದರ್ಶಿಸಿದ್ದ ಶೌರ್ಯ ಮತ್ತು ಸಾಹಸ ದೇಶಾದ್ಯಂತ ಶ್ಲಾಘನೆಗೆ ಪಾತ್ರವಾಗಿತ್ತು. ಬಹುತೇಕ ಸಾವಿನಂಚಿಗೆ ತೆರಳಿ ವಾಪಸಾಗಿರುವ ಶೈಲಭ್ ಮತ್ತೆ ಸೇನಾ ಕರ್ತವ್ಯಕ್ಕೆ ತೆರಳಲು ತುದಿಗಾಲಲ್ಲಿ ನಿಂತಿದ್ದಾರೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ಮಾಡಿದ್ದ ಸಂದರ್ಭದಲ್ಲಿ ಅಲ್ಲಿ ಹೆಚ್ಚಾಗಿ ಸೈನಿಕರು ಇರಲಿಲ್ಲ. ಈ ವೇಳೆ ಗರುಡಾ ತಂಡದ ಕಮಾಂಡೋ ಆಗಿದ್ದ ಗೌರ್ ಅವರು ಸ್ವತಃ ಶಸ್ತ್ರಾಸ್ತ್ರ ಹಿಡಿದು ಉಗ್ರರ ವಿರುದ್ಧ ದಾಳಿಗೆ ಇಳಿದರು. ಈ ಸಂದರ್ಭದಲ್ಲಿ ಅವರ ಹೊಟ್ಟೆಗೆ ಬರೊಬ್ಬರಿ ನಾಲ್ಕು ಗುಂಡುಗಳು ಹೊಕ್ಕವು. ಮೊದಲ ಗುಂಡು ಬಿದ್ದಾಗ ಶೈಲಭ್ ಗೌರ್ ಯಾವುದೋ ಮರದ ತೊಗಟೆ ಗೀಚಿಕೊಂಡಿರಬೇಕು ಎಂದು ಭಾವಿಸಿ ಮತ್ತೆ ದಾಳಿಯಲ್ಲಿ ನಿರತರಾದರು. ಆದರೆ ಆ ಬಳಿಕ ಮತ್ತೆ 3 ಗುಂಡುಗಳು ಹೊಕ್ಕವು. ಹೊಟ್ಟೆಯಿಂದ ರಕ್ತ ಧಾರಾಕಾರವಾಗಿ ಹರಿಯುತ್ತಿದ್ದರೂ, ದೃತಿಗೆಡದ ಶೈಲಭ್ ಗೌರ್ ಸತತ 4 ಗಂಟೆಗಳ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಒಂದು ವೇಳೆ ಗೌರ್ ತಮ್ಮ ದಾಳಿಯನ್ನು ನಿಲ್ಲಿಸಿದ್ದರೆ, ಉಗ್ರರು ವಾಯುನೆಲೆಯ ಸೂಕ್ಷ್ಮ ಪ್ರದೇಶಗಳನ್ನು ಪ್ರವೇಶಿಸಿ ಎಣಿಸಲಾರದಷ್ಟು ದೊಡ್ಡ ಪ್ರಮಾಣದಲ್ಲಿ ವಿನಾಶ ಮಾಡುವ ಸಂಭವಿತ್ತು. ಇದನ್ನರಿತಿದ್ದ ಗೌರ್ ಸೇನೆ ಬರುವವರೆಗೂ ತಾವೇ ಉಗ್ರರ ವಿರುದ್ಧ ದಾಳಿ ಮಾಡುತ್ತಿದ್ದರು. ಸೇನೆ ಬಂದ ಬಳಿಕವಷ್ಟೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.

ಇದೀಗ ಗುಣಮುಖರಾಗಿರುವ ಶೈಲಭ್ ಗೌರ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧವಾಗಿದ್ದಾರೆ. ಈ ಬಗ್ಗೆ ಅವರ ಕುಟುಂಬ ವರ್ಗ ಹರ್ಷ ವ್ಯಕ್ತಪಡಿಸಿದ್ದು, ಗೌರ್ ಕೂಡ ತಮ್ಮ ಇಷ್ಟದ ಕೆಲಸಕ್ಕೆ  ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಚಿಕ್ಕವಯಸ್ಸಿನಿಂದಲೂ ಹಾಲಿವುಡ್ ನ ಕಮಾಂಡೋ, ರ್ಯಾಂಬೋ ಚಿತ್ರಗಳನ್ನು ನೋಡುತ್ತಲೇ ಬೆಳೆದಿದ್ದ ಗೌರ್, ಬಳಿಕ 2010ರಲ್ಲಿ ಸೇನೆಗೆ ಸೇರಿದ್ದರು.  ಮತ್ತೊಂದು ಪ್ರಮುಖ ಅಂಶವೆಂದರೆ ಗೌರ್ ಕುಟುಂಬದ ಮೂರು ತಲೆಮಾರುಗಳು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿದುಬಂದಿದೆ.

"ಪಠಾಣ್ ಕೋಟ್ ವಾಯುನೆಲೆಯಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದೆವು. ಜನವರಿ 2 ಮಧ್ಯರಾತ್ರಿ ಸುಮಾರು 3.30ರ ಸುಮಾರಿನಲ್ಲಿ ಉಗ್ರರು ದಾಳಿ ಮಾಡಿದ್ದರು. ಹೀಗಾಗಿ ಕೂಡಲೇ ನಾವು  ಪೊಸಿಷನ್ ತೆಗೆದುಕೊಂಡು ಮರು ದಾಳಿಗೆ ಸಿದ್ಧರಾದೆವು. ಈ ವೇಳೆ ನನ್ನ ಹೊಟ್ಟೆಗೆ ಏನೋ ಕೀಚಿದ ಅನುಭವವಾಯಿತು. ಮರದ ತೊಗಟೆ ಕೀಚಿರಬೇಕು ಎಂದು ಎಣಿಸಿದ್ದೆ. ಆದರೆ ಆ ಬಳಿಕವೇ  ತಿಳಿದದ್ದು ಅದು ಗುಂಡೇಟು" ಎಂದು ಶೈಲಭ್ ತಮ್ಮ ಉಗ್ರರ ವಿರುದ್ಧದ ದಾಳಿಯ ರೋಚಕ ಮಾಹಿತಿಯನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com