
ನವದೆಹಲಿ: ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ ಮತ್ತು ಆ ಬಳಿಕ ಪಾಟಿಯಾಲ ಕೋರ್ಟ್ ಆವರಣದಲ್ಲಿ ನಡೆದ ಘರ್ಷಣೆ ಸಂಬಂಧ ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿಂದ ರಚನೆಯಾಗಿದ್ದ ತನಿಖಾ ಸಮಿತಿ ಗುರುವಾರ ತನ್ನ ವರದಿಯನ್ನು ಸಿದ್ಧಪಡಿಸಿದೆ.
ಪಾಟಿಯಾಲ ಕೋರ್ಟ್ ಆವರಣದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ತನಿಖೆ ನಡೆಸಲು ನ್ಯಾ. ಜೆ.ಚಲಮೇಶ್ವರ ಮತ್ತು ಎಎಂ ಸಪ್ರೆ ಅವರು ಸುಪ್ರೀಂ ಕೋರ್ಟ್ ನ ಆರು ಮಂದಿ ಹಿರಿಯ ವಕೀಲರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚನೆ ಮಾಡಿತ್ತು. ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್, ದುಷ್ಯಂತ್ ದಾವೆ, ಎಡಿಎನ್ ರಾವ್, ಅಜಿತ್ ಕೆ ಸಿನ್ಹಾ ಮತ್ತು ಹರಿನ್ ರಾವಲ್ ಅವರನ್ನೊಳಗೊಂಡ ಸಮಿತಿಯಿಂದ ಸುಪ್ರೀಂಕೋರ್ಟ್ ಗಲಭೆ ಸಂಬಂಧ ವರದಿ ಕೇಳಿತ್ತು.
ಇಂದು ಈ ವಿಶೇಷ ಸಮಿತಿ ತನ್ನ ವರದಿ ಸಿದ್ಧಪಡಿಸಿದ್ದು, ಪಾಟಿಯಾಲ ಕೋರ್ಟ್ ಆವರಣದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭಯ ಮತ್ತು ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ. "ಪ್ರಸ್ತುತ ವಾತಾವರಣ ನಿಜಕ್ಕೂ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭಯದಿಂದ ಕೂಡಿದೆ. ಪೊಲೀಸರು ತಮ್ಮ ಕರ್ತವ್ಯವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ. ಉದ್ರಿಕ್ತ ಜನರು ಪೊಲೀಸರು ಹಾಕಿದ್ದ ರಕ್ಷಣಾ ಬ್ಯಾರಿಕೇಡ್ ಗಳನ್ನು ಕಿತ್ತೆಸೆದು, ನೀರಿನ ಬಾಟಲಿಗಳನ್ನು ತೂರಿದ್ದಾರೆ ಮತ್ತು ನ್ಯಾಯಾಲಯದ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ಎಸೆದಿದ್ದಾರೆ. ತೀರಾ ಕೆಟ್ಟದಾಗಿ ವಕೀಲರನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಿತಿ ಸದಸ್ಯ ಮತ್ತು ಹಿರಿಯ ವಕೀಲ ರಾಜೀವ್ ಧವನ್ ಅವರು, ನ್ಯಾಯಾಲಯದ ಆವರಣದಲ್ಲಿ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಪೊಲೀಸರು ನ್ಯಾಯಾಲಯದ ರಕ್ಷಣೆಗೆ ಇರಲಿಲ್ಲ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಾಗಲೂ ಎಂದು ಆತನ ಮೇಲೆ ಹಲ್ಲೆಯಾಗಿತ್ತು. ಈ ಎಲ್ಲ ಘಟನೆಗಳಿಗೂ ದೆಹಲಿ ಪೊಲೀಸ್ ಆಯುಕ್ತರೇ ನೇರ ಹೊಣೆ ಎಂದು ಹೇಳಿದ್ದಾರೆ.
ಇನ್ನು ವಕೀಲರ ಸಮಿತಿ ಗುರುವಾರ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ ಗೆ ನೀಡಲಿದ್ದು, ಘರ್ಷಣೆ ನಡೆದ ಸಂದರ್ಭದಲ್ಲಿ ಹಿರಿಯ ವಕೀಲರೊಬ್ಬರು ರೆಕಾರ್ಡ್ ಮಾಡಿದ್ದ ವಿಡಿಯೋ ದಾಖಲೆಯನ್ನು ಕೂಡ ನ್ಯಾಯಾಲಯಕ್ಕೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
Advertisement