ಜಾದವ್ ಪುರ ವಿಶ್ವವಿದ್ಯಾನಿಲಯದ ದೇಶವಿರೋಧಿಗಳ ಬಗ್ಗೆ ದೀದಿಯಿಂದ ವರದಿ ಕೇಳಿದ ಕೇಂದ್ರ

ದೇಶವಿರೋಧಿ ಘೋಷಣೆ ಕೂಗಿರುವ ಪಶ್ಚಿಮ ಬಂಗಾಳದ ಜಾದವ್ ಪುರ ವಿವಿಯ ವಿದ್ಯಾರ್ಥಿಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸೂಚಿಸಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತಾ: ಜೆಎನ್ ಯು ವಿವಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ದೇಶವಿರೋಧಿ ಘೋಷಣೆ ಕೂಗಿರುವ ಪಶ್ಚಿಮ ಬಂಗಾಳದ ಜಾದವ್ ಪುರ ವಿವಿಯ ವಿದ್ಯಾರ್ಥಿಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸೂಚಿಸಿದೆ.
ಫೆ.16 ರಂದು ಜೆಎನ್ ಯು ವಿವಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಜಾದವ್ ಪುರ ವಿವಿಯ ವಿದ್ಯಾರ್ಥಿಗಳ ಗುಂಪೊಂದು "ಕಾಶ್ಮೀರ ಸ್ವಾತಂತ್ರ್ಯ ಬಯಸುತ್ತಿದೆ, ಮಣಿಪುರ ಸ್ವಾತಂತ್ರ್ಯ ಬಯಸುತ್ತಿದೆ ನಾವು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತೇವೆ", ಅಫ್ಜಲ್ ಗುರು ಎಂದರೆ ಸ್ವಾತಂತ್ರ್ಯ, ಗಿಲಾನೆ ಎಂದರೆ ಸ್ವಾತಂತ್ರ್ಯ ನಾವು ಸ್ವಾತಂತ್ರ್ಯ ಕಿತ್ತುಕೊಳ್ಳುತ್ತೇವೆ ಎಂಬ ಘೋಷಣೆ ಕೂಗಿದ್ದರು. ಈ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಬಗ್ಗೆ ವರದಿ ನೀಡುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಗೃಹ ಸಚಿವಾಲಯ ಸೂಚನೆ ನೀಡಿದೆ. 
ವಿಡಿಯೋ ಕ್ಲಿಪ್ ನಲ್ಲಿ ನಿರ್ಜ್ಹರ್ ಮುಖರ್ಜಿ ಎಂಬ ವಿದ್ಯಾರ್ಥಿ ಈ ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ತನ್ನ ಘೋಷಣೆಯನ್ನು ಸಮರ್ಥಿಸಿಕೊಂಡಿರುವ ಮುಖರ್ಜಿ ಎಂಬ ವಿದ್ಯಾರ್ಥಿ, ಸ್ವಾತಂತ್ರ್ಯ ಎಂದರೆ ಬಿಜೆಪಿ ಮತ್ತು ಆರ್ ಎಸ್ಎಸ್ ನಿಂದ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತೇವೆ ಎಂದೇ ಹೊರತು ಪ್ರತ್ಯೇಕತಾವಾದಿ ಧೋರಣೆಯಲ್ಲ ಎಂದು ಹೇಳಿದ್ದಾರೆ. 
ಪ್ರತಿಭಟನೆ ಆಯೋಜಿಸಿದ್ದ ಮೂರು ವಿದ್ಯಾರ್ಥಿಗಳೂ ಸಹ ದೇಶವಿರೋಧಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು ನಾವು ಪ್ರತಿಭಟನಾ ಮೆರವಣಿಗೆಯನ್ನಷ್ಟೇ ಹಮ್ಮಿಕೊಂಡಿದ್ದೆವು, ಆದರೆ ಕೆಲವು ಹಳೆಯ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆ ಕೂಗಿರಬಹುದು. ಅದನ್ನು ನಾವು ಬೆಂಬಲಿಸುವುದಿಲ್ಲ, ನಮ್ಮ ಪ್ರತಿಭಟನೆ ಏನಿದ್ದರೂ ಜೆಎನ್ ಯು ವಿವಿಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದರ ವಿರುದ್ಧವಷ್ಟೇ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com