ತ್ರಿಭಾಷಾ ಸೂತ್ರದ ಮೂಲಕ ಸಂಸ್ಕೃತದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಯೋಜನೆ

ಉನ್ನತ ಮಟ್ಟದ ಸಮಿತಿಯ ಶಿಫಾರಸು ಅಂಗೀಕಾರಗೊಂಡಲ್ಲಿ ಸಿಬಿಎಸ್ ಇ ಹಾಗೂ ಐಸಿಎಸ್ ಇ ಶಾಲೆಯ ವಿದ್ಯಾರ್ಥಿಗಳು 10 ನೇ ತರಗತಿ ವರೆಗೂ ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ.
ಮಾನವ ಸಂಪನ್ಮೂಲ ಇಲಾಖೆ (ಸಾಂದರ್ಭಿಕ ಚಿತ್ರ)
ಮಾನವ ಸಂಪನ್ಮೂಲ ಇಲಾಖೆ (ಸಾಂದರ್ಭಿಕ ಚಿತ್ರ)

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಸಮಿತಿಯ ಶಿಫಾರಸು ಅಂಗೀಕಾರಗೊಂಡಲ್ಲಿ ಸಿಬಿಎಸ್ ಇ ಹಾಗೂ ಐಸಿಎಸ್ ಇ ಶಾಲೆಯ ವಿದ್ಯಾರ್ಥಿಗಳು  10 ನೇ ತರಗತಿ ವರೆಗೂ ಮೂರು ಭಾಷೆಗಳನ್ನು ಹಾಗೂ ಉನ್ನತ ಶಿಕ್ಷಣ ದಲ್ಲಿ ಎರಡು  ಭಾಷೆಗಳನ್ನು ಕಲಿಯಬೇಕಾಗುತ್ತದೆ. 
ತ್ರಿಭಾಷಾ ಸೂತ್ರ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯಲು ಹೆಚ್ಚು ಪ್ರೋತ್ಸಾಹ ನೀಡುತ್ತದೆ, ಇದರಿಂದಾಗಿ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಸಂಸ್ಕೃತ ಭಾಷೆಯಲ್ಲಿಯೇ ವ್ಯಾಸಂಗ ಮಾಡಲು ಅವಕಾಶ ಸಿಗಲಿದೆ ಎಂದು ಮಾನವ ಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಸಮಿತಿ ನೀಡಿರುವ ಹೊಸ ವರದಿಯಲ್ಲಿ ಹೇಳಿದೆ.
ಪ್ರಸ್ತುತ ಅನೇಕ ಸಿಬಿಎಸ್ ಇ ಶಾಲೆಗಳಲ್ಲಿ ಕೇವಲ ಎರಡು ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿದೆ. ತ್ರಿಭಾಷಾ ಸೂತ್ರ ಪಾಲನೆ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ಉಳಿದ ಶಾಲೆಗಳು ಸ್ವತಂತ್ರ ನಿರ್ಧಾರ ಕೈಗೊಳ್ಳಬಹುದಾಗಿದೆ. ಸಿಬಿಎಸ್ ಇ ಶಾಲೆಗಳಲ್ಲಿ 8 ನೇ ತರಗತಿ ವರೆಗೆ ಮಾತ್ರ ತ್ರಿಭಾಷಾ ಸೂತ್ರ ಅಳವಡಿಸಲಾಗಿತ್ತು ಹಾಗೂ 9 -10 ನೇ ತರಗತಿಗಳಲ್ಲಿ ಎರಡು ಭಾಷೆ 11 -12 ನೇ ತರಗತಿಗಳಲ್ಲಿ ಒಂದೇ ಭಾಷೆಯನ್ನು ಕಲಿಸಲಾಗುತ್ತಿತ್ತು ಎಂದು ಸಮಿತಿಯ ಸದಸ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿಕೆ ನೀಡಿದ್ದಾರೆ.
ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸಿಬಿಎಸ್ ಇ, ಐಸಿಎಸ್ ಇ, ಎನ್ಐಒಸಿ ಶಿಕ್ಷಣ ಮಂಡಳಿಗಳು ಈ ವರೆಗೆ ತ್ರಿಭಾಷಾ ಸೂತ್ರವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದೆ ಇರುವುದನ್ನು ಮಾನವ ಸಂಪನ್ಮೂಲ ಇಲಾಖೆ ಉನ್ನತ ಮಟ್ಟದ ಸಮಿತಿಯ ವರದಿ ಟೀಕಿಸಿದೆ. ಸಿಬಿಎಸ್ ಇ ಯ ಈ ಪ್ರವೃತ್ತಿ ಈಗ ರಾಜ್ಯ ಮಟ್ಟದಲ್ಲೂ ವ್ಯಾಪಿಸಿದ್ದು, ಇಂಗ್ಲೀಷ್ ನೊಂದಿಗೆ ಮಾತೃ ಭಾಷೆಯನ್ನೂ ಮಾತ್ರ ಕಲಿಸುವ ಪದ್ಧತಿ ರಾಜ್ಯಗಳಲ್ಲೂ ಪ್ರಾರಂಭವಾಗಿದೆ.
ಬೋರ್ಡ್ ಪರೀಕ್ಷೆಗಳಲ್ಲಿ ಮೂರು ಭಾಷೆಗಳ ಪ್ರಶ್ನೆ ಪತ್ರಿಕೆ ಬರೆಯುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗಲಿದೆ ಎಂಬ ಅಭಿಪ್ರಾಯ ತ್ರಿಭಾಷಾ ಸೂತ್ರ ಅಳವಡಿಕೆ ಬಗ್ಗೆ ಶಿಕ್ಷಣ ತಜ್ಞರಿಂದ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com