
ನವದೆಹಲಿ: ದೇಶದ್ರೋಹದ ಆರೋಪ ಎದುರಿಸುತ್ತಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ನ ಬಂಧನ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಕನಯ್ಯಾ ಮೇಲಿನ ದಾಳಿ ಕುರಿತು ಆತಂಕ ವ್ಯಕ್ತಪಡಿಸಿದ ಕನಯ್ಯಾ ಸೋದರ ಮಣಿಕಾಂತ್ ಸಿಂಗ್, ನನ್ನ ತಮ್ಮ ದೋಷಮುಕ್ತನಾಗಿ ಹೊರಗೆ ಬರುತ್ತಾನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ಇಡೀ ಪ್ರಕರಣ ಒಂದು ಸಿನಿಮಾ ರೀತಿ ಇದೆ.ಅಂದು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ವಿಡಿಯೋವನ್ನು ನಕಲಿ ಮಾಡಿ ಕನಯ್ಯಾ ದೇಶದ್ರೋಹಿ ಎನ್ನುವಂತೆ ಬಿಂಬಿಸಲಾಗಿದೆ. ಪ್ರಕರಣದ ವಿಚಾರಣೆ ಮುಗಿದ ಬಳಿಕ ಅವನು ಸಂಪೂರ್ಣ ಆರೋಪಮುಕ್ತನಾಗಿ ಹೊರಗೆ ಬರುತ್ತಾನೆ ಎಂಬ ವಿಶ್ವಾಸವಿದೆ. ರಾಷ್ಟ್ರೀಯತೆ ಎಂಬುದು ಅವನ ರಕ್ತದಲ್ಲಿದೆ ಎಂದರು.
ಜೆಎನ್ ಯುದ ಬೆಳವಣಿಗೆ ಬಗ್ಗೆ ಪ್ರಧಾನಿಯವರು ಅಸಮಾಧಾನಗೊಂಡಿದ್ದಾರೆ ಎಂದು ಪತ್ರಿಕೆಯಲ್ಲಿ ಓದಿದೆ. ಅವರು ಈ ವಿವಾದದ ಬಗ್ಗೆ ಇದುವರೆಗೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿಯವರು ಬಡಕುಟುಂಬದಿಂದ ಬಂದವರು. ಅವರಿಗೆ ಬಡವರ, ದೀನರ ನೋವು ಅರ್ಥವಾಗುತ್ತದೆ ಎಂದು ಭಾವಿಸಿದ್ದೇವೆ. ಅವರು ಮೌನ ಮುರಿದು ಘಟನೆ ಬಗ್ಗೆ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.
Advertisement