
ನವದೆಹಲಿ: ಇಡೀ ದೇಶದಾದ್ಯಂತ ಸದ್ದು ಮಾಡಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ ಇದೀಗ ಸಂಸತ್ತಿನಲ್ಲೂ ಸದ್ದು ಮಾಡುತ್ತಿದ್ದು, ಇದೀಗ ರಾಜ್ಯಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಪ್ರಕರಣವನ್ನು ಮಾಯಾವತಿಯವರು ಪ್ರಸ್ತಾಪಿಸಿದರು. ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಸಂಸತ್ತಿನಲ್ಲಿ ಸಾಕಷ್ಟು ಗದ್ದಲವೆದ್ದಿತ್ತು. ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಇಬ್ಬರು ಕೇಂದ್ರ ಸಚಿವರ ಹೆಸರು ಕೇಳಿಬಂದಿದೆ. ಸರ್ಕಾರ ಈ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡಬೇಕುಪ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಆಡಳಿತಾರೂಢ ಪಕ್ಷದ ನಾಯಕರು, ಈ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು. ಸರ್ಕಾರದ ಈ ಮಾತಿಗೆ ತೃಪ್ತಿಗೊಳ್ಳದ ಬಿಎಸ್ ಪಿ ನಾಯಕರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಲು ಆರಂಭಿಸಿದರು. ನಂತರ ಅನಿವಾರ್ಯವಾಗಿ ಪಿ.ಜೆ. ಕುರಿಯನ್ ಅವರು 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದ್ದರು. ನಂತರ ಮತ್ತೆ ಕಲಾಪ ಆರಂಭವಾಗದರೂ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಾದ್ದರಿಂದಾಗಿ ಮತ್ತೆ ಮಧ್ಯಾಹ್ನದವರೆಗೂ ಕಲಾಪವನ್ನು ಮುಂದೂಡಿದರು.
ನಂತರ ಮಾತನಾಡಿರುವ ಮಯಾವತಿಯವರು ಹೈದರಾಬಾದ್ ವಿವಿಯ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ನಿಜಕ್ಕೂ ಆಂತಕ ಹುಟ್ಟಿಸುವಂತಹದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆರ್ ಎಸ್ಎಸ್ ತನ್ನ ಮಹಾಪಾತಕ ಸಿದ್ಧಾಂತವನ್ನು ಶೈಕ್ಷಣಿಕ ಸಂಸ್ಥೆಗಳಾದ ಹೈದರಾಬಾದ್ ವಿಶ್ವವಿದ್ಯಾಲಯ, ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯ, ಜಮಿಯಾ ಮಿಲಿಯಾ ಮತ್ತು ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಇದಕ್ಕುತ್ತರಿದ ಸಂಸತ್ತು ವ್ಯವಹಾರಗಳ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಅವರು, ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಕುರಿಯನ್ ಅವರು ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ, ಮಾಯಾವತಿ ನಮ್ಮ ಪ್ರತಿಕ್ರಿಯೆಯನ್ನು ಕೇಳದೆಯೇ ಅವರು ಆಗ್ರಹವನ್ನೇ ಮೊದಲು ಕೇಳುವಂತೆ ಹೇಳುತ್ತಿದ್ದಾರೆ. ನಾವು ಯಾವುದೇ ಚರ್ಚೆಯಿಂದಲೂ ಓಡಿಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ನಂತರ ಮಾತನಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ನಾವು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿಚಾರ ಕುರಿತಂತೆ ಮಾತನಾಡಬೇಕು. ಆದರೆ, ಸರ್ಕಾರ ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ಏನು ಮಾತನಾಡುತ್ತೇನೋ ಎಂಬುದರ ಕುರಿತಂತೆ ಅವರಿಗೆ ಭಯವಿದೆ ಎಂದು ಹೇಳಿದ್ದಾರೆ.
Advertisement