ರೋಹಿತ್ ಪ್ರಕರಣ: ಸ್ಮೃತಿ ಇರಾನಿ ಹೇಳಿಕೆ ಸರಿಯಲ್ಲ ಎಂದ ಹೈದ್ರಾಬಾದ್ ವಿವಿ ವೈದ್ಯಾಧಿಕಾರಿ

ಬುಧವಾರ ಸಂಸತ್‌ನಲ್ಲಿ ಆಕ್ರೋಶಭರಿತರಾಗಿ ಮಾತನಾಡಿದ ಸ್ಮೃತಿ ಇರಾನಿ ರೋಹಿತ್ ವೇಮುಲರ ಮೃತದೇಹದ ಸಮೀಪ ಯಾವುದೇ ವೈದ್ಯರನ್ನು ಬೆಳಗ್ಗೆ 6.30ರವರೆಗೆ...
ಸ್ಮೃತಿ ಇರಾನಿ
ಸ್ಮೃತಿ ಇರಾನಿ
ಹೈದ್ರಾಬಾದ್: ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್‌ನಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಯವರ ಒಂದು ಹೇಳಿಕೆ ಬಗ್ಗೆ ಹೈದ್ರಾಬಾದ್ ವಿಶ್ವ ವಿದ್ಯಾನಿಲಯದ ವೈದ್ಯಾಧಿಕಾರಿ ಅಸಮಧಾನ ವ್ಯಕ್ತ ಪಡಿಸಿದ್ದಾರೆ. 
ಬುಧವಾರ ಸಂಸತ್‌ನಲ್ಲಿ ಆಕ್ರೋಶಭರಿತರಾಗಿ ಮಾತನಾಡಿದ ಸ್ಮೃತಿ ಇರಾನಿ ರೋಹಿತ್ ವೇಮುಲರ ಮೃತದೇಹದ ಸಮೀಪ ಯಾವುದೇ ವೈದ್ಯರನ್ನು ಬೆಳಗ್ಗೆ 6.30ರವರೆಗೆ ಬಿಟ್ಟಿರಲಿಲ್ಲ. ಆ ಮಗುವನ್ನು ಬದುಕಿಸುವ ಸಾಧ್ಯತೆಗಳ ಬಗ್ಗೆ ಯತ್ನಿಸಲು ವೈದ್ಯರಿಗೆ ಅವಕಾಶ ಕೊಟ್ಟಿರಲಿಲ್ಲ, ಆದರೆ ಮೃತದೇಹವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಯಿತು ಎಂದು ಹೇಳಿದ್ದರು.
ಆದರೆ ಸ್ಮೃತಿಯವರ ಈ ಹೇಳಿಕೆ ಸರಿಯಿಲ್ಲ ಎಂದು ಹೈದ್ರಾಬಾದ್ ವಿವಿಯ ಚೀಫ್ ಮೆಡಿಕಲ್ ಆಫೀಸರ್ ರಾಜಶ್ರೀ ಎಂ ಹೇಳಿದ್ದಾರೆ.
ಜನವರಿ 17ರಂದು ಸಂಜೆ ನಾನು ಕೆಲಸ ಮುಗಿಸಿ ಬಂದಾಗ ನನ್ನ ಡ್ರೈವರ್ ನನಗೆ ಕರೆ ಮಾಡಿ ಎನ್ ಆರ್‌ಎಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದನು. ಕೆಲವೇ ಕ್ಷಣದಲ್ಲಿ ನಾನು ಹಾಸ್ಟೆಲ್‌ಗೆ ತೆರಳಿದ್ದು, ಅಲ್ಲಿ ಹೋದಾಗ ರೋಹಿತ್ ಮೃತದೇಹವನ್ನು ಬೆಡ್‌ನಲ್ಲಿ ಮಲಗಿಸಲಾಗಿತ್ತು. ನಾನು ಆತನ ಹೃದಯ ಬಡಿತ, ನಾಡಿ ಬಡಿತ ಎಲ್ಲವನ್ನೂ ಪರೀಕ್ಷಿಸಿ ಆತನ ಸಾವನ್ನು ದೃಢಪಡಿಸಿದ್ದೆ. ಈ ಬಗ್ಗೆ ನಾನು ಉಪಕುಲಪತಿಯವರಿಗೂ ತಿಳಿಸಿದ್ದೆ. ವಿವಿಯ ಹೆಲ್ತ್ ಬುಕ್ ನಲ್ಲಿಯೂ ಈ ವಿಷಯವನ್ನು ದಾಖಲಿಸಿದ್ದೇನೆ ಎಂದು ರಾಜಶ್ರೀ ಅವರು ಹೇಳಿದ್ದಾರೆ. 
ಅದೇ ವೇಳೆ ಸ್ಮೃತಿ ಇರಾನಿಯವರ ಹೇಳಿಕೆಯನ್ನು ಖಂಡಿಸಿದ ಜಿಖರುಲ್ಲಾ ನಿಶಾ ಎಂಬ ವಿದ್ಯಾರ್ಥಿ ಸಾಮಾಜಿಕ ತಾಣದಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ರೋಹಿತ್ ಆತ್ಮಹತ್ಯೆ ಮಾಡಿದ್ದನ್ನು ತಿಳಿದ ಕೂಡಲೇ ನಾನು ಹೆಲ್ತ್ ಕೇರ್ ಸೆಂಟರ್‌ಗೆ ಫೋನ್ ಮಾಡಿದ್ದೆ. ಫೋನ್ ಮಾಡಿದ 5 ನಿಮಿಷದಲ್ಲೇ ಡಾ. ರಾಜಶ್ರೀ ಅವರು ಹಾಸ್ಟೆಲ್ ಗೆ ಬಂದು ರೋಹಿತ್ ಸಾವನ್ನು ಖಚಿತ ಪಡಿಸಿದ್ದರು ಎಂದು ನಿಶಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com