
ನವದೆಹಲಿ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಹುತಾತ್ಮರ ಪಟ್ಟಿಯಲ್ಲಿ ಗುಜರಾತ್ ನಲ್ಲಿ ಎನ್ ಕೌಂಟರ್ ಆಗಿದ್ದ ಇಶ್ರಾತ್ ಜಹಾನ್ ಹೆಸರಿದೆ ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇಶ್ರಾತ್ ಜಹಾನ್ ಭಯೋತ್ಪಾದಕಳೇ ಅಲ್ಲವೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯು ತನ್ನ ವೆಬ್ ಸೈಟ್ ನ ಹುತಾತ್ಮರ ಪಟ್ಟಿಯಲ್ಲಿ ಇಶ್ರಾತ್ ಜಹಾನ್ ಹೆಸರನ್ನು ಹಾಕಿತ್ತು. ನಂತರ ಹೆಸರನ್ನು ತೆಗೆದು ಹಾಕಿತ್ತು. ಇಶ್ರಾತ್ ಜಹಾನ್ ಏನೂ ತಿಳಿಯದಂತೆಯೇ ಆಟವಾಡಿದ್ದಳು ಎಂದು ಹೇಳಿದ್ದಾರೆ.
ಇಶ್ರಾತ್ ನಿಜವಾಗಲೂ ಉಗ್ರ ಸಂಘಟನೆಗೆ ಸೇರಿದ್ದವಳೇ ಆಗಿದ್ದಾಳೆ. ದೇಶದೆಲ್ಲೆಡೆ ಓಡಾಡಿ ಕೊನೆಗೆ ಗುಜರಾತ್ ನಲ್ಲಿ ಅಂತ್ಯಗೊಂಡಿದ್ದಾಳೆ. ಪ್ರಸ್ತುತ ತನಿಖೆಯಾಗಬೇಕಿರುವುದು ಆಕೆ ಭಯೋತ್ಪಾದಕಳೇ ಅಥವಾ ಅಲ್ಲವೇ ಎಂಬುದರ ಬಗ್ಗೆ. ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ನಿಜವಾದದ್ದೇ ಅಥವಾ ನಕಲಿಯೇ ಎಂಬುದರ ಬಗ್ಗೆ ಎಂದು ಹೇಳಿದ್ದಾರೆ.
ಇಶ್ರಾತ್ ಜಹಾನ್ ಮುಂಬೈ ನ ಮುಂಬ್ರಾದ ನಿವಾಸಿಯಾಗಿದ್ದು, 2004ರಲ್ಲಿ ಗುಜರಾತ್ ನಲ್ಲೆ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದಳು. ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದ ನಾಲ್ವರು ಉಗ್ರ ಸಂಘಟನೆಗೆ ಸೇರಿದ್ದವರಾಗಿದ್ದು, ಇವರು ನರೇಂದ್ರ ಮೋದಿ ಹಾಗೂ ಅಂದಿನ ಮುಖ್ಯಮಂತ್ರಿಗಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಹೀಗಾಗಿ ನಾಲ್ವರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಆದರೆ, ಈ ಎನ್ ಕೌಂಟರ್ ಗೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಇಶ್ರಾತ್ ಅಮಾಯಕಳೆಂದು ಹೇಳಲಾಗುತ್ತಿತ್ತು.ಈ ಪ್ರಕರಣಕ್ಕೆ ಮುಂಬೈ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಡೇವಿಡ್ ಹೆಡ್ಲಿ ಹೊಸ ತಿರುವನ್ನು ನೀಡಿದ್ದನು. ಎನ್ ಕೌಂಟರ್ ಆದ ಇಶ್ರಾತ್ ಜಹಾನ್ ಎಲ್ ಇ ಟಿ ಉಗ್ರ ಸಂಘಟನೆಗೆ ಸೇರಿದ್ದವಳಾಗಿದ್ದು, ಈಕೆ ಮಾನವ ಬಾಂಬರ್ ಆಗಿದ್ದಳು ಎಂದು ಹೇಳಿದ್ದ.
Advertisement