
ಕೋಲ್ಕತ್ತಾ: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ದುರ್ಗಾಪುರ್ ನಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಆಸಿಫ್ ಎಂದು ಬಂಧಿತ ಯುವಕನನ್ನು ಗುರುತಿಸಲಾಗಿದ್ದು, ತನಿಖಾ ತಂಡ ಆತನನ್ನು ಮತ್ತು ಆತನ ತಂದೆಯನ್ನು ವಿಚಾರಣೆ ನಡೆಸುತ್ತಿದೆ. ದುರ್ಗಾಪುರ್ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳ ಗಡಿಭಾಗವಾದ ಬುರ್ದ್ವಾನ್ ಗೆ ಹತ್ತಿರದಲ್ಲಿದೆ. ಬುರ್ದ್ವಾನ್ ನಲ್ಲಿ ರಾಷ್ಟ್ರೀಯ ತನಿಖಾ ತಂಡ ಇತ್ತೀಚೆಗೆ ಜಮ್ಮತ್ ಉಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯನ್ನು ಪತ್ತೆ ಹಚ್ಚಿತ್ತು.
ಉಗ್ರಗಾಮಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಯುವಕನ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ರಾಜ್ಯ ಸಿಐಡಿ ಪೊಲೀಸರೊಂದಿಗೆ ದುರ್ಗಾಪುರ್ ಗೆ ತಲುಪಿದರು. ಆಸಿಫ್ ಅಹ್ಮದ್ ದುರ್ಗಾಪುರ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ತನ್ನ ನಾಲ್ವರು ಸ್ನೇಹಿತರೊಂದಿಗೆ ವಾಸ ಮಾಡುತ್ತಿದ್ದು, ತನ್ನ ಹೆಸರನ್ನು ಆಸಿಫ್ ಅಹ್ಮದ್ ಗೆ ಬದಲಾಗಿ ರಾಜಾ ದಾಸ್ ಎಂದು ಇಟ್ಟುಕೊಂಡಿದ್ದ. ಆತ ದುರ್ಗಾಪುರ್ ನಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದ ಎಂದು ತನಿಖಾ ತಂಡದ ಅಧಿಕಾರಿ ಸಂಜೀವ್ ಸಿಂಗ್ ತಿಳಿಸಿದ್ದಾರೆ.
ಕಳೆದ ಮಂಗಳವಾರ ತನಿಖಾಧಿಕಾರಿಗಳು ಆಸಿಫ್ ನನ್ನು ಬಂಧಿಸಿ ಆತನ ಪೂರ್ವಜರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೊನ್ನೆ ಬುಧವಾರ ತಂದೆ-ಮಗನಿಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಕೋಲ್ಕತ್ತಾಗೆ ಕರೆತರಲಾಯಿತು.
ಕಳೆದ ಫೆಬ್ರವರಿ 5ರಂದು ಉತ್ತರ ಪ್ರದೇಶದಿಂದ ರಾಷ್ಟ್ರೀಯ ತನಿಖಾ ತಂಡ ಅಬ್ದುಸ್ ಸಮಿ ಖಾಸ್ಮಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಸಿಫ್ ನ ಹೆಸರು ಕೇಳಿಬಂದಿದೆ.
Advertisement