ನವದೆಹಲಿ: ತಮ್ಮ ಸಂಬಳವನ್ನೂ ಏಳನೇ ವೇತನ ಆಯೋಗದಡಿಯಲ್ಲಿ ಸೇರಿಸಬೇಕು ಎಂಬ ಬೇಡಿಕೆಯೊಡ್ಡಿ ಸರ್ಕಾರಿ ಆಸ್ಪತ್ರೆಗಳ ದಾದಿಯರು ಸಾಮೂಹಿಕ ಮುಷ್ಕರ ಹೂಡಿದ ಕಾರಣ ಶುಕ್ರವಾರ ಆಸ್ಪತ್ರೆಯ ಕೆಲಸಗಳು ಏರು ಪೇರಾಗಿವೆ. ದಾದಿಯರು ಮುಷ್ಕರದಿಂದಾಗಿ ಈ ಮೊದಲೇ ನಿಗದಿಯಾಗಿದ್ದ 250ಕ್ಕೂ ಹೆಚ್ಚು ಸರ್ಜರಿಗಳನ್ನು ಇನ್ನೊಂದು ದಿನಕ್ಕೆ ನಿಗದಿ ಮಾಡಲಾಗಿದೆ.
ಆರೋಗ್ಯ ಸಚಿವಾಲಯ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ದಾದಿಯರಂ ಸಂಘಟನೆ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದು, ಶುಕ್ರವಾರ ಸಾಮೂಹಿಕವಾಗಿ ರಜೆ ಹಾಕಿ ದಾದಿಯರು ಹೊರ ನಡೆದಿದ್ದರು.
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಿಂದ ಸಿಕ್ಕ ಮಾಹಿತಿ ಪ್ರಕಾರ 80 ಸರ್ಜರಿಗಳನ್ನು ಮರು ನಿಗದಿ ಪಡಿಸಲಾಗಿದ್ದು, ಸಫ್‌ದಾರ್ಗಂಜ್ ಆಸ್ಪತ್ರೆಯಲ್ಲಿ 50 ಸರ್ಜರಿಗಳನ್ನು ಮುಂದೂಡಲಾಗಿದೆ.
ದಾದಿಯರ ಮುಷ್ಕರದಿಂದಾಗಿ ಆಸ್ಪತ್ರೆಯ ಕೆಲಸಗಳಲ್ಲಿ ಏರುಪೇರಾಗಿದೆ ಎಂದು ಆರ್‌ಎಂಎಲ್ ಆಸ್ಪತ್ರೆಯ ಹಿರಿಯ ಸರ್ಜನ್ ಸಮೀರ್ ಪುರ್‌ಕ್ಯಸ್ಥ ಹೇಳಿದ್ದಾರೆ.
ಏಳನೇ ವೇತನ ಆಯೋಗದ ಶಿಫಾರಸಿನಂತೆ ತಮಗೆ ನರ್ಸಿಂಗ್ ಭತ್ಯೆ, ರಿಸ್ಕ್ ಭತ್ಯೆ ಮತ್ತು ರಾತ್ರಿ ಪಾಳಿ ಭತ್ಯೆಯನ್ನು ನೀಡಬೇಕೆಂದು ದಾದಿಯರು ಮುಷ್ಕರ ನಡೆಸುತ್ತಿದ್ದಾರೆ. ಆದರೆ ಇವರ ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿಕೆ ನೀಡಿದೆ.