
ನವದೆಹಲಿ: ವಿವಾದಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ದೇಶ ವಿರೋಧ ಚಟುವಟಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿರುವುದರ ಕುರಿತಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸೋಮವಾರ ತಿಳಿಸಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಬಂಧಿತನಾಗಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯನ್ನು ದೆಹಲಿ ಹೈ ಕೋರ್ಟ್ ನಿನ್ನೆ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ನ್ಯಾಯಾಲಯವು ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ಯಾವುದಾದರೂ ವಿಡಿಯೋಗಳಿವೆಯೇ ಎಂದು ದೆಹಲಿ ಪೊಲೀಸರನ್ನು ಕೇಳಿತ್ತು. ಈ ವೇಳೆ ಉತ್ತರಿಸಿದ್ದ ಪೊಲೀಸರು ಕನ್ಹಯ್ಯ ವಿರುದ್ಧ ದೇಶ ವಿರೋಧಿ ಘೋಷಣೆ ಕೂಗಿರುವುದಕ್ಕೆ ಯಾವುದೇ ವಿಡಿಯೋಗಳಾಗಲಿ ಅಥವಾ ಸಾಕ್ಷ್ಯಾಧಾರಗಳಾಗಲಿ ಲಭ್ಯವಾಗಿಲ್ಲ ಎಂದು ಹೇಳಿದ್ದರು.
ಕಾರ್ಯಕ್ರಮ ಫೆ.9 ರಂದು ವಿವಿಯ ಮುಖ್ಯದ್ವಾರದ ಬಳಿ ನಡೆದಿದೆ. ಸ್ಥಳದಲ್ಲಿ ನಾಗರಿಕರ ಉಡುಪು ಧರಿಸಿ ಮೂವರು ಪೊಲೀಸರಿದ್ದರು. ಸ್ಥಳದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲವೇಕೆ? ಇದನ್ನು ವಿಡಿಯೋ ಮಾಡಲಿಲ್ಲವೇಕೆ? ಖಾಸಗಿ ವಾಹಿನಿಯ ವಿಡಿಯೋಗಾಗಿ ಯಾಕೆ ಕಾದಿದ್ದಿರಿ? ಎಂದು ಪೊಲೀಸನ್ನು ಪ್ರಶ್ನಿಸಿದೆ.
ಇದಕ್ಕುತ್ತರಿಸಿರುವ ಪೊಲೀಸರು ಜೆಎನ್ ಯು ಆವರಣದಲ್ಲಿದ್ದ ಒಬ್ಬ ವ್ಯಕ್ತಿ ತನ್ನ ಮೊಬೈಲ್ ಮೂಲಕ ವಿಡಿಯೋವನ್ನು ಚಿತ್ರೀಕರಿಸಿದ್ದ. ಭದ್ರತಾಧಿಕಾರಿಯ ಮುಖ್ಯಸ್ಥ ಕನ್ಹಯ್ಯ ಕುರಿತಂತೆ ಮಾಹಿತಿ ಕೇಳಿದಾಗ ಈ ವಿಡಿಯೋ ಹೊರಬಂದಿತ್ತು ಎಂದು ಹೇಳಿದರು. ಅಲ್ಲದೆ, ಕನ್ಹಯ್ಯ ಜಾಮೀನು ಮಂಜೂರಿಗೆ ದೆಹಲಿ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಇದರಂತೆ ದೆಹಲಿ ಸರ್ಕಾರ ಕನ್ಹಯ್ಯನಿಗೆ ಜಾಮೀನು ಮಂಜೂರು ಮಾಡುವಂತೆ ಆಗ್ರಹಿಸಿದೆ.
ಮುಗ್ಧರಿಗೆ ಶಿಕ್ಷೆಯಾಗಬಾರದು. ಕನ್ಹಯ್ಯ ವಿರುದ್ಧ ಯಾವುದೇ ವಿಡಿಯೋಗಳಾಗಲಿ, ಸಾಕ್ಷ್ಯಾಧಾರಗಳಾಗಲಿ ಲಭ್ಯವಾಗಿಲ್ಲ. ಕನ್ಹಯ್ಯ ಯಾವುದೇ ದೇಶ ವಿರೋಧಿ ಘೋಷಣೆಗಳನ್ನು ಕೂಗಿಲ್ಲ. ಯಾವುದೇ ಗುಂಪನ್ನು ಪ್ರತಿನಿಧಿಸಿಲ್ಲ. ಎರಡು ಗುಂಪುಗಳ ನಡುವೆ ಘರ್ಷಣೆಯಾಗುತ್ತಿರುವ ಕುರಿತಂತೆ ಮಾಹಿತಿ ತಿಳಿದ ನಂತರವಷ್ಟೇ ಆತ ವಿವಿ ಆವರಣಕ್ಕೆ ಬಂದಿದ್ದನು ಎಂದು ಕನ್ಹಯ್ಯ ಪರ ವಕೀಲ ಕಪಿಲ್ ಸಿಬಲ್ ಅವರು ತಮ್ಮ ವಾದ ಮಂಡಿಸಿದ್ದಾರೆ.
ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ಹಾಗೂ ಗುಂಪನ್ನು ಪ್ರತಿನಿಧಿಸುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕನ್ಹಯ್ಯನಿಗೆ ಜಾಮೀನು ಮಂಜೂರು ಮಾಡಿದರೆ ಇದು ದೇಶದ ಮೇಲೆ ಪರಿಣಾಮ ಬೀರುತ್ತದೆ. ಈ ಹಿಂದೆಯು ಜಾದವ್ ಪುರ ವಿವಿಯಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು. ಈ ವೇಳೆಯೂ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಇದೀಗ ಇಂತಹದ್ದೇ ಘಟನೆ ಜೆಎನ್ ಯುವಿನಲ್ಲಿ ನಡೆದಿದ್ದು, ಈ ಪ್ರಕರಣದಲ್ಲೂ ಜಾಮೀನು ಮಂಜೂರು ಮಾಡಿದರೆ, ಘಟನೆ ಮತ್ತೆ ಮರುಕಳಿಸುತ್ತದೆ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ನ್ಯಾಯಾಲಯವು ಎರಡು ಗುಂಪುಗಳು ಘರ್ಷಣೆಯಲ್ಲಿ ತೊಡಗಿರುವುದು ಹಾಗೂ ಕನ್ಹಯ್ಯ ಗುಂಪನ್ನು ಪ್ರತಿನಿಧಿಸುತ್ತಿರುವುದಕ್ಕಾಗಿ, ದೇಶ ವಿರೋಧಿ ಘೋಷಣೆ ಕೂಗಿದ್ದಕ್ಕಾಗಲಿ ಯಾವುದೇ ಸಾಕ್ಷ್ಯಾಧಾರ ಅಥವಾ ವಿಡಿಯೋಗಳಿದ್ದರೆ ನೀಡಿ ಮತ್ತೆ ಪೊಲೀಸರನ್ನು ಕೇಳಿತು. ಈ ಬಗ್ಗೆ ನಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಆದರೆ. ಜೆಎನ್ ಯು ಅಧಿಕಾರಿಗಳು ತಮ್ಮ ಮೊಬೈಲ್ ನಲ್ಲಿ ವಿಡಿಯೋವನ್ನು ಚಿತ್ರಿಸಿತ್ತು ಎಂದು ಹೇಳಿದರು.
ನಂತರ ಪೊಲೀಸರನ್ನು ತರಾಡೆಗೆ ತೆಗೆದುಕೊಂಡ ನ್ಯಾಯಾಲಯವು, ಪ್ರಕರಣ ಸಂಬಂಧ ಸಾಕ್ಷ್ಯಾಧಾರ ದೊರಕಿದ್ದರು ಆ ಮೊಬೈಲ್ ನ್ನು ಯಾಕೆ ವಶಕ್ಕೆ ಪಡೆಯಲಿಲ್ಲ. ಯಾಕೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಯಾಕೆ ಕಳುಹಿಸಲಿಲ್ಲ ಎಂದು ಪ್ರಶ್ನಿಸಿತು. ಇದಕ್ಕುತ್ತರಿಸಿದ ಪೊಲೀಸರು ನಾವು ಈ ವಿಡಿಯೋವನ್ನು ತೆಗೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದೆವು. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದ ಕೆಲವು ಸಾಕ್ಷ್ಯಾಧಾರಗಳು ನಾಶವಾಗಿದ್ದವು ಎಂದು ಹೇಳಿದ್ದಾರೆ. ಇದರಂತೆ ವಾದ ಪ್ರತಿವಾದಗಳನ್ನು ಕೇಳಿದ ನ್ಯಾಯಾಲಯವು ಕನ್ಹಯ್ಯ ಜಾಮೀನು ಅರ್ಜಿ ತೀರ್ಪನ್ನು ಮುಂದೂಡಿದೆ.
Advertisement