
ಪಠಾಣ್ ಕೋಟ್: ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ವಾಯು ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದ ಉಗ್ರರ ಪೈಕಿ ಮತ್ತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಕೂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ವಾಯುನೆಲೆಯಲ್ಲಿ ಅಡಗಿ ಕುಳಿತು ಸೈನಿಕರತ್ತ ಗುಂಡು ಹಾರಿಸುತ್ತಿದ್ದ ಇಬ್ಬರು ಉಗ್ರರನ್ನು ಚಾಲಕ ರಹಿತ ಲಘು ಯುದ್ಧ ವಿಮಾನ ಡ್ರೋನ್ ಅಥವಾ ವಾಯುಸೇನೆಗೆ ಸೇರಿದ ಎಂಐ-35 ಯುದ್ಧ ವಿಮಾನ ಪತ್ತೆ ಮಾಡಿ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ. ಆದರೆ ಪ್ರಸ್ತುತ ಮೃತ ಉಗ್ರರ ಶವಗಳ ದೊರೆತಿಲ್ಲ ಎಂದು ತಿಳಿದುಬಂದಿದ್ದು, ಶೋಧ ಕಾರ್ಯ ಮುಂದುವರೆದಿದೆ. ಅಂತೆಯೇ ದಾಳಿಯಲ್ಲಿ ನಿರತರಾಗಿರುವ ಉಳಿದ ಉಗ್ರರಿಗಾಗಿ ಸೈನಿಕರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸೇನಾ ಮೂಲಗಳ ಪ್ರಕಾರ ಉಗ್ರ ವಿರುದ್ಧದ ಈ ಕಾರ್ಯಾಚರಣೆ ಶನಿವಾರ ರಾತ್ರಿ ಇಡೀ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಉಗ್ರರ ಗುಂಪಿನಲ್ಲಿ ಎಷ್ಟು ಮಂದಿ ಇದ್ದಾರೆ ಎಂಬ ನಿಖರ ಮಾಹಿತಿ ಇಲ್ಲದ ಕಾರಣ ಉಗ್ರರ ವಿರುದ್ಧದ ಕಾರ್ಯಾಚರಣೆಯ ಪ್ರದೇಶದ ವ್ಯಾಪ್ತಿಯನ್ನು ಕೂಡ ವಿಸ್ತರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಭೀಕರ ದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ -ಇ- ಮಹಮದ್ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಠಾಣ್ ಕೋಟ್ ಗೆ ಲಗ್ಗೆ ಇಟ್ಟಿರುವ ಉಗ್ರರು ಪಾಕಿಸ್ತಾನದ ಭಾವಲ್ ಪುರದ ಮೂಲದವರಾಗಿರಬಹುದು ಎಂದು ಶಂಕಿಸಲಾಗಿದೆ. ಈ ನಡುವೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ದೆಹಲಿಯಲ್ಲಿ ತುರ್ತು ಭದ್ರತಾ ಸಭೆ ಕರೆದಿದ್ದು, ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಧೋವಲ್, ವಾಯುಸೇನೆ, ಭೂ ಸೇನೆ ಮತ್ತು ನೌಕಾದಳದ ಮುಖ್ಯಸ್ಥರು ಹಾಜರಾಗಿ ಚರ್ಚಿಸಿದ್ದಾರೆ.
ಸೇನಾ ಹೆಲಿಕಾಪ್ಟರ್ ಮತ್ತು ಯುದ್ಧ ವಿಮಾನಗಳು ಸುರಕ್ಷಿತ
ಈ ನಡುವೆ ಸೇನಾ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರೂ, ಅಲ್ಲಿದ್ದ ಯುದ್ಧ ವಿಮಾನಗಳು ಮತ್ತು ಸೇನಾ ಹೆಲಿಕಾಪ್ಟರ್ ಗಳು ಸುರಕ್ಷಿತವಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
Advertisement