
ರಾಯ್ ಪುರ: ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 11 ಮಂದಿ ನಕ್ಸಲೀಯರು ಭಾನುವಾರ ಶರಣಾಗತರಾಗಿದ್ದಾರೆ.
ನಕ್ಸಲೀಯರನ್ನು ಸಮಾಜದಲ್ಲಿ ಸೇರಿಸುವ ಛತ್ತೀಸ್ಗಢ ಸರ್ಕಾರ ಕ್ರಮದಿಂದಾಗಿ ಇಂದು ಕೊಂಡಗಾಂವ್ ಜಿಲ್ಲೆಯಲ್ಲಿ 11 ಮಂದಿ ನಕ್ಸಲೀಯರು ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಛತ್ತೀಸ್ ಗಢ ಸರ್ಕಾರದ ಶರಣಾಗತಿ ನೀತಿಯಿಂದ ಪ್ರಭಾವಿತಗೊಂಡು ಮತ್ತು ಸಂಘಟನೆಯ ಹಿರಿಯರು ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಭ್ರಮನಿರಸನಗೊಂಡು ಅವರು ಶರಣಾಗತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾಗತರಾಗಿರುವವರ ಪೈಕಿ ಗಣೇಶ ಕೊರ್ರಂ (23 ವರ್ಷ) ಮತ್ತು ಲಲಿತ್ ಕಶ್ಯಪ್ (22 ವರ್ಷ) ಪ್ರಮುಖರಾಗಿದ್ದು, ಇವರ ತಲೆಗಳಿಗೆ ಸರ್ಕಾರ ತಲಾ 3 ಲಕ್ಷ ರೂಪಾಯಿಗಳ ಬಹುಮಾನ ಘೊಷಣೆ ಮಾಡಿತ್ತು. ಈ ಇಬ್ಬರು ನಾಯಕರು ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ನಕ್ಸಲೀಯರ ಸಂದೇಶ ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೊಂಡಗಾಂವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಎಸ್. ವಟ್ಟಿ ಅವರು, ಸಂಘಟನೆಯ ಹಿರಿಯ ನಾಯಕರ ಕಿರುಕುಳದಿಂದ ಯುವಕರು ಭ್ರಮ-ನಿರಸನಗೊಂಡಿದ್ದು, ಛತ್ತೀಸ್ಗಢ ಸರ್ಕಾರದ ಶರಣಾಗತಿ ನೀತಿಯಿಂದ ಪ್ರಭಾವಿತರಾಗಿದ್ದಾರೆ. ಹೀಗಾಗಿ ಸರ್ಕಾರದ ಮುಂದೆ ಶರಣಾಗಿದ್ದಾರೆ ಎಂದು ಹೇಳಿದರು.
Advertisement