ಪಠಾಣ್ ಕೋಟ್ ಮೇಲೆ ಉಗ್ರಗಾಮಿಗಳ ದಾಳಿಯ ನಂತರದ ಪರಿಸ್ಥಿತಿಯ ದೃಶ್ಯ
ಪಠಾಣ್ ಕೋಟ್ ಮೇಲೆ ಉಗ್ರಗಾಮಿಗಳ ದಾಳಿಯ ನಂತರದ ಪರಿಸ್ಥಿತಿಯ ದೃಶ್ಯ

ಪಠಾಣ್ ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿಗೆ ಮುನ್ನ ತಪ್ಪಿದ ಸುಳಿವು

ಭಯೋತ್ಪಾದಕರು ಸಮವಸ್ತ್ರದಲ್ಲಿ ವೇಷ ಹಾಕಿಕೊಂಡು ಬಂದು ಪೊಲೀಸ್ ಅಧಿಕಾರಿಯ ಕಾರು ಅಪಹರಣ ಮಾಡಿದ್ದು, ಎಚ್ಚರಿಕೆ...
Published on

ನವದೆಹಲಿ: ಭಯೋತ್ಪಾದಕರು ಸಮವಸ್ತ್ರದಲ್ಲಿ ವೇಷ ಹಾಕಿಕೊಂಡು ಬಂದು ಪೊಲೀಸ್ ಅಧಿಕಾರಿಯ ಕಾರು ಅಪಹರಣ ಮಾಡಿದ್ದು,  ಎಚ್ಚರಿಕೆ ಗಂಟೆಯಾಗಿತ್ತು. ಈ ಮೂಲಕ ಪಠಾಣ್ ಕೋಟ್  ವಾಯುನೆಲೆಯಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ದಾಳಿಯನ್ನು ತಡೆಯಬಹುದಾಗಿತ್ತು ಎಂದು ಭದ್ರತಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ದಾಳಿ ನಡೆಸಿದ ಭಯೋತ್ಪಾದಕರನ್ನು ಪಾಕಿಸ್ತಾನ ಮೂಲದವರೆಂದು ಶಂಕಿಸಲಾಗಿದ್ದು, ತಮ್ಮ ಸಹೋದ್ಯೋಗಿಗಳು ದಾಳಿ ಸಂದರ್ಭದಲ್ಲಿ ಮಂದಗತಿಯಲ್ಲಿ ಪ್ರತಿಕ್ರಿಯಿಸಿದ್ದು ಕೂಡ ಭದ್ರತಾ ಲೋಪದೋಷದ ಭಾಗವಾಗಿದೆ ಎಂದು ಹೇಳಿದ್ದಾರೆ.

ಏಳು ಮಂದಿ ಯೋಧರು ಸಾವನ್ನಪ್ಪಿ, 20 ಯೋಧರು ಗಾಯಗೊಂಡ ಕಳೆದ ಶನಿವಾರದ ಪಠಾಣ್ ಕೋಟ್ ನಲ್ಲಿನ ಉಗ್ರಗಾಮಿಗಳ ದಾಳಿ ನಡೆದ ಮೂರು ದಿನಗಳ ನಂತರ ಇಂದು ಕೂಡ ಯೋಧರ ಕಾರ್ಯಾಚರಣೆ ಮುಂದುವರಿದಿದೆ.

ಶನಿವಾರ ದಾಳಿಗೆ ಒಂದು ದಿನ ಮುಂಚೆ ಅಂದರೆ ಶುಕ್ರವಾರ ನಸುಕಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ತಮ್ಮ ಕಾರು ಅಪಹರಣಗೊಂಡ ನಂತರ ಸಹೋದ್ಯೋಗಿಯೊಬ್ಬರನ್ನು ದೂರವಾಣಿ ಮೂಲಕ ಕರೆ ಮಾಡಿ ಸಶಸ್ತ್ರ ದರೋಡೆಕೋರ ಕೇಸು ದಾಖಲಿಸುವಂತೆ ಹೇಳಿದರು. ಆದರೆ ಅವರಲ್ಲಿದ್ದ ದಾಖಲೆಗಳು ಸರಿಯಾಗಿಲ್ಲದಿದ್ದರಿಂದ ಅವರ ದೂರನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪಂಜಾಬ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ರಾಯ್ ಟರ್ಸ್ ಗೆ  ಹೇಳಿದ್ದಾರೆ.

ಶುಕ್ರವಾರ ಸಂಜೆಯೇ ದಾಳಿಕೋರರು ಪಠಾಣ್ ಕೋಟ್ ನೆಲೆಯ ಮೇಲೆ ದಾಳಿ ನಡೆಸಲು ಸ್ಥಳ ನಿಗದಿಪಡಿಸಿದ್ದರು ಎಂದು ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ತಿಳಿಸಿದ್ದಾರೆ.
ಸಲ್ವಿಂದರ್ ಸಿಂಗ್ ಮತ್ತು ಇನ್ನಿಬ್ಬರು ಪಾಕಿಸ್ತಾನ ಗಡಿಯಲ್ಲಿರುವ ದೇವಾಲಯವನ್ನು ಭೇಟಿ ಮಾಡಿ ಬಂದ ಕಾರನ್ನು ಅಪಹರಿಸಿದ 12 ಗಂಟೆಗಳ ನಂತರ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ.
ಸಂಶೋಧನೆ ಮತ್ತು ವಿಶ್ಲೇಷಣಾ ಪಡೆಯ ಮಾಜಿ ಮುಖ್ಯಸ್ಥ ಎ.ಎಸ್. ದುಲತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬಹಳ ಸಮಯವನ್ನು ವೃಥಾ ವ್ಯಯಿಸಲಾಗಿದೆ. ಉಗ್ರಗಾಮಿಗಳು ಒಳನುಸುಳಿ ಅತ್ತಿತ್ತ 24 ಗಂಟೆಗಳ ಕಾಲ ಸುತ್ತಾಡಲು ಹೇಗೆ ಸಾಧ್ಯ ಎಂದು ಅವರು ಕೇಳಿದ್ದಾರೆ.

ವಾಯುನೆಲೆಯಲ್ಲಿ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಮೇಲೆ ಹಾನಿಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕಳುಹಿಸಲಾಗಿತ್ತು. ಆದಾಗ್ಯೂ ಆಂತರಿಕ ಸಹಕಾರದ ಕೊರತೆಯಿಂದಾಗಿ  ಭದ್ರತೆಗೆ ಚ್ಯುತಿ ಬಂದಿರಬಹುದು. ವಾಯುನೆಲೆ ಭದ್ರ ಕೋಟೆಯಂತಿದೆ. ಅಲ್ಲಿ ಒಬ್ಬ ಹೊರಗಿನ ಪೊಲೀಸ್ ಅಧಿಕಾರಿ ಕೂಡ ಒಳಗೆ ಹೋಗಬೇಕೆಂದರೆ ಮನವಿ ಪತ್ರದಲ್ಲಿ ಬರೆದು ಹೋಗಬೇಕು. ಆದರೆ ಇಲ್ಲಿನ ಭದ್ರತಾ ಅಧಿಕಾರಿಗಳಿಗೂ ಸ್ಥಳೀಯ ಪೊಲೀಸ್ ಇಲಾಖೆಗೂ ಯಾವುದೇ ಸಂಬಂಧವಿರಲಿಲ್ಲ.
 
ಸಲ್ವಿಂದರ್ ಸಿಂಗ್ ಅವರ ಕಾರನ್ನು ಅಪಹರಿಸಿ ದಾಳಿ ನಡೆದ ಪಠಾಣ್ ಕೋಟ್  ವಾಯುನೆಲೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಬಿಟ್ಟು ಹೋಗಿದ್ದರು. ಆದರೆ ಅವರು ವಾಯುನೆಲೆಯ ಕಂಪೌಂಡ್ ಒಳಗೆ ಹೇಗೆ ಕಾಲಿಟ್ಟರು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ವಾಯುನೆಲೆಯ ಒಳಗೆ ಹೋದ ತಕ್ಷಣವೇ ಗುಂಡು ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com