
ನವದೆಹಲಿ: ಆಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಬಾಲಿವುಡ್ ನಟ ಆಮೀರ್ ಖಾನ್ ರನ್ನು "ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನ"ದಿಂದ ಕೇಂದ್ರ ಸರ್ಕಾರ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.
ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನ ಭಾರತದ ಪ್ರವಾಸೋದ್ಯಮ ಸಚಿವಾಲಯದ ಅಭಿಯಾನವಾಗಿದ್ದು, ಇದಕ್ಕೆ ನಟ ಅಮೀರ್ ಖಾನ್ರನ್ನು ಪ್ರವಾಸೋದ್ಯಮ ಸಚಿವಾಲಯ ಕಳೆದ ವರ್ಷ ರಾಯಭಾರಿಯನ್ನಾಗಿ ನೇಮಿಸಿತ್ತು. ಆದರೆ ಕಳೆದ ನವಂಬರ್ನಲ್ಲಿ ಭಾರತದಲ್ಲಿ ಅಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿದ್ದ ನಟ ಅಮೀರ್ ಖಾನ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.
ನವೆಂಬರ್ ನಲ್ಲಿ ನಡೆದ ಮಾಧ್ಯಮ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಅಮೀರ್ ಖಾನ್ ಅವರು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಹಾಗಾಗಿ ನನ್ನ ಹೆಂಡತಿ ದೇಶ ತೊರೆಯುವ ಪ್ರಸ್ತಾವ ಮಾಡಿದ್ದಾಳೆ ಎಂಬ ವಿವಾದತ್ಮಕವಾಗಿ ಹೇಳಿಕೆ ನೀಡಿದ್ದರು. ಅಮೀರ್ ಖಾನ್ ಹೇಳಿಕೆಗೆ ಸಂಬಂಧಿಸಿದಂತೆ ದೇಶವ್ಯಾಪಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಸಾಕಷ್ಟು ವಿವಾದಗಳ ಬಳಿಕ ನಟ ಅಮೀರ್ ಖಾನ್ ಟ್ವಿಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ತಮ್ಮ ಹೇಳಿಕೆಯನ್ನು ತಿರುಚಲಾಗಿದ್ದು, ತಾವು ಆ ರೀತಿ ಹೇಳಿಲ್ಲ ಎಂದು ಅಮೀರ್ ಖಾನ್ ಹೇಳಿದ್ದರು.
ಶೀಘ್ರದಲ್ಲೇ ಅಧಿಕೃತ ಪ್ರಕಟಣೆ?
ಇನ್ನು ಅಮೀರ್ ಖಾನ್ ಅವರನ್ನು ಇನ್ ಕ್ರೆಡಿಬಲ್ ಇಂಡಿಯಾದಿಂದ ಕೈಬಿಡುವ ನಿರ್ಧಾರ ಕೈಗೊಂಡಿರುವ ಕೇಂದ್ರ ಪ್ರವಾಸೋಧ್ಯಮ ಇಲಾಖೆ ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುತ್ತದೆ ಎಂದು ಹೇಳಲಾಗುತ್ತಿದೆ.
Advertisement