
ಪಠಾಣ್ ಕೋಟ್ : ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಪ್ರಕರಣ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ತಂಡ(ಎನ್ ಐಎ) ಬುಧವಾರ ಸ್ಛಳಕ್ಕೆ ಆಗಮಿಸಿದೆ.
ವಿಧಿವಿಜ್ಞಾನ ತಜ್ಞರೊಂದಿಗೆ ಆಗಮಿಸಿರುವ ತಂಡ ದಾಳಿಯಲ್ಲಿ ಹತರಾದ ಉಗ್ರಗಾಮಿಗಳ ಶವಗಳ ಪರೀಕ್ಷೆ ನಡೆಸುತ್ತಿದೆ. ಪಠಾಣ್ ಕೋಟ್ ಮೇಲೆ ದಾಳಿ ನಡೆಸಿದವರ ಪತ್ತೆಗಾಗಿ ಪಾಕಿಸ್ತಾನದ ಸಹಕಾರವನ್ನು ನಿರೀಕ್ಷಿಸುವುದಾಗಿ ತನಿಖಾ ತಂಡ ನಿನ್ನೆ ಹೇಳಿತ್ತು. ಉಗ್ರಗಾಮಿಗಳು ಪಾಕಿಸ್ತಾನ ಮೂಲದವರೆಂಬುದು ನಿಜ ಎಂದು ತನಿಖಾ ತಂಡ ಈಗಾಗಲೇ ಹೇಳಿದೆ.
ದೇವಸ್ಥಾನದಲ್ಲಿ ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಉಗ್ರಗಾಮಿಗಳು ಕಾರನ್ನು ಅಪಹರಿಸಿದ ಗುರುದಾಸಪುರ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ಅವರನ್ನು ಕೂಡ ತನಿಖಾ ತಂಡ ವಿಚಾರಿಸುತ್ತಿದೆ.
ಉಗ್ರರಿಂದ ತಮ್ಮ ಸೆರೆಯಾದದ್ದು ಮತ್ತು ಬಿಡುಗಡೆ ಕುರಿತು ಸಲ್ವಿಂದರ್ ಸಿಂಗ್ ನೀಡುತ್ತಿರುವ ಅಸಮಂಜಸ ಹೇಳಿಕೆಗಳು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.ಸಿಂಗ್ ನೀಡುವ ಹೇಳಿಕೆಗೂ, ಪಂಜಾಬ್ ಪೊಲೀಸರ ಹೇಳಿಕೆಗಳಿಗೂ ವ್ಯತ್ಯಾಸವಿದೆ ಎನ್ನಲಾಗುತ್ತಿದೆ.
'' ಘಟನೆ ನಡೆದ ಆದಷ್ಟು ಬೇಗನೆ ನಾನು ಪೊಲೀಸರಿಗೆ ವಿಷಯ ತಿಳಿಸಿದ್ದೇನೆ. ನನ್ನ ಜವಾಬ್ದಾರಿಯನ್ನು ನಾನು ಮಾಡಿದ್ದೇನೆ. ಅವರು ನನ್ನನ್ನು ಸಂಪೂರ್ಣವಾಗಿ ನಂಬಿದ್ದರು. ಉಗ್ರರ ಜೊತೆ ನಾನು ಹೋರಾಡುತ್ತಿದ್ದರೆ ನನ್ನನ್ನು ಕೊಂದು ಹಾಕುತ್ತಿದ್ದರು. ಅವರು ಐದು ಜನ ಶಸ್ತ್ರಸಜ್ಜಿತರಾಗಿದ್ದರು. ನನ್ನ ಬಳಿ ಏನೂ ಇರಲಿಲ್ಲ ಎನ್ನುತ್ತಾರೆ ಸಲ್ವಿಂದರ್ ಸಿಂಗ್.
ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪಾಕ್ ಪ್ರಧಾನಿ ನವಾಜ್ ಷರೀಫ್, ಪಠಾಣ್ ಕೋಟ್ ನಲ್ಲಿ ಉಗ್ರಗಾಮಿಗಳ ದಾಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ನೀಡಿರುವ ಮಾಹಿತಿ ಆಧಾರದ ಮೇಲೆ ನಾವು ಕೆಲಸ ಮಾಡುತ್ತೇವೆ. ಘಟನೆ ಕುರಿತು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ದಾಳಿಯ ನಂತರ ಭಾರತ ಪ್ರೌಢಿಮೆಯಿಂದ ಹೇಳಿಕೆ ನೀಡಿದೆ. ಉಗ್ರಗಾಮಿಗಳು ಎರಡು ದೇಶಗಳ ನಡುವಣ ಶಾಂತಿ ಮಾತುಕತೆಗೆ ಅಡ್ಡಿಯನ್ನುಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಠಾಣ್ ಕೋಟ್ ನಲ್ಲಿ ಸೇನಾ ಯೋಧರ ಕಾರ್ಯಾಚರಣೆ 5ನೇ ದಿನವಾದ ಇಂದು ಕೂಡ ಮುಂದುವರಿದಿದೆ.
Advertisement