
ನವದೆಹಲಿ: ಬಿಜೆಪಿ ಸದಸ್ಯ ಹಾಗೂ ಕಿರುತೆರೆ ಕಲಾವಿದ ಗಜೇಂದ್ರ ಚೌಹಾಣ್ ಅವರನ್ನು ಪ್ರತಿಷ್ಠಿತ ‘ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ’ಯ (ಎಫ್‌ಟಿಐಐ) ಅಧ್ಯಕ್ಷರಾಗಿ ನೇಮಕ ಮಾಡಿರುವುದನ್ನು ತೀವ್ರವಾಗಿ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸುತ್ತಿವೆ.
ಅಧಿಕಾರ ಸ್ವೀಕರಿಸಲು ಎಫ್ ಟಿಟಿಐ ಕಚೇರಿಗೆ ಗಜೇಂದ್ರ ಚೌಹಾಣ್ ಬಂದಿದ್ದರು. ಈ ವೇಳೆ ಗಜೇಂದ್ರ ಚೌಹಾಣ್ ನೇಮಕಾತಿಯನ್ನು ವಿರೋಧಿಸಿರುವ ವಿದ್ಯಾರ್ಥಿ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಈ ವೇಳೆ ಮಧ್ಯ ಪ್ರವೇಶಿಸಿರುವ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಆದರೆ, ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್ ಟಿಐಐ) ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಹಲವು ತಿಂಗಳಿಂದಲೂ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಪ್ರತಿಭಟನೆಗಳ ಮಧ್ಯೆಯೂ ಸರ್ಕಾರ ಗಜೇಂದ್ರ ಚೌಹಾಣ್ ಅವರನ್ನು ಎಫ್ ಟಿಐಐ ಅಧ್ಯಕ್ಷರಾಗಿ ನೇಮಕ ಮಾಡಿದೆ. ಇದೀಗ ಚೌಹಾಣ್ ವಿರುದ್ಧದ ಪ್ರತಿಭಟನೆ ಮತ್ತೆ ಆರಂಭವಾಗಿದ್ದು, ಚೌಹಾಣ್ ನೇಮಕ ವಿರುದ್ಧ ಹಲವು ಕೂಗು ಕೇಳಿಬರುತ್ತಿದೆ.
ಗಜೇಂದ್ರ ಚೌಹಾಣ್‌ಅವರು ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರ ನಿರ್ವಹಿಸಿದ್ದರು. ಅಡೂರು ಗೋಪಾಲಕೃಷ್ಣನ್, ಶ್ಯಾಮ್‌ಬೆನಗಲ್, ಗಿರೀಶ್‌ಕಾರ್ನಾಡ್, ಯು. ಆರ್. ಅನಂತಮೂರ್ತಿ ಇತ್ಯಾದಿ ಗಣ್ಯರು ಈ ಸ್ಥಾನ ಅಲಂಕರಿಸಿದ್ದವರು. ಗಜೇಂದ್ರ ಚೌಹಾಣ್ ಅವರು ಬಿಜೆಪಿ ಸದಸ್ಯರಾಗಿರುವುದರಿಂದ ಅವರನ್ನು ನೇಮಿಸಲಾಗಿದೆ. ಇದೊಂದು ರಾಜಕೀಯ ನೇಮಕಾತಿ, ಅಧ್ಯಕ್ಷರಾಗಿ ನಮಗೆ ಮೋದಿಯವರ ಕೈಗೊಂಬೆ ಬೇಡವೇ ಬೇಡ ಎಂದು ಎಫ್ ಟಿಐಐ ವಿದ್ಯಾರ್ಥಿಗಳು ಘೋಷಣೆ ಕೂಗಿ ಜುಲೈ2 ರಂದು ಪ್ರತಿಭಟನೆ ನಡೆಸಿದ್ದರು.
Advertisement