ಸದನದಲ್ಲಿ ನಾವು ಸೀರೆ, ಉಡುಗೆ ಬಗ್ಗೆ ಮಾತನಾಡುತ್ತೇವೆ: ಸುಪ್ರಿಯಾ ಸುಳೆ

ಜನರಿಂದ ಆಯ್ಕೆಯಾಗಿ ಹೋದ ಸಂಸದರು ಸಂಸತ್ತು ಅಧಿವೇಶನದ ಸಂದರ್ಭಗಳಲ್ಲಿ ಅಕ್ಕಪಕ್ಕದಲ್ಲಿ ಕುಳಿತವರ ಜೊತೆ...
ಎನ್ ಸಿಪಿ ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ
ಎನ್ ಸಿಪಿ ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ

ನಾಸಿಕ್: ಜನರಿಂದ ಆಯ್ಕೆಯಾಗಿ ಹೋದ ಸಂಸದರು ಸಂಸತ್ತು ಅಧಿವೇಶನದ ಸಂದರ್ಭಗಳಲ್ಲಿ ಅಕ್ಕಪಕ್ಕದಲ್ಲಿ ಕುಳಿತವರ ಜೊತೆ ಏನೋ ಮಾತನಾಡುತ್ತಿರುತ್ತಾರೆ. ಯಾವುದೋ ಗಂಭೀರ ವಿಷಯಗಳ ಕುರಿತು ಚರ್ಚಿಸುತ್ತಿರಬಹುದು ಎಂದು ನಾವು ಅಂದುಕೊಂಡಿದ್ದರೆ ಬಹುತೇಕ ಸಂದರ್ಭಗಳಲ್ಲಿ ಅದು ತಪ್ಪು ಎನ್ನುತ್ತಾರೆ ಸ್ವತಃ  ಸಂಸದೆಯಾಗಿರುವ ಹಿರಿಯ ಎನ್ ಸಿಪಿ ನಾಯಕಿ, ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ.
 
ಸಂಸತ್ತು ಅಧಿವೇಶನದ ಸಂದರ್ಭದಲ್ಲಿ ಗಂಭೀರ ವಿಷಯಗಳು ಚರ್ಚೆಯಾಗುತ್ತಿರುವ ಸಂದರ್ಭಗಳಲ್ಲಿ ಹಲವು ಸಂಸದರು ಸಣ್ಣಪುಟ್ಟ ವಿಷಯಗಳ ಕುರಿತು ಹರಟೆ ಹೊಡೆಯುವುದರಲ್ಲಿ, ಗಾಸಿಪ್ ಗಳಲ್ಲಿ ತೊಡಗಿರುತ್ತಾರೆ ಎನ್ನುತ್ತಾರೆ ಸುಪ್ರಿಯಾ ಸುಳೆ. ಅವರು ಹೀಗೆ ಹೇಳಿದ್ದು, ಮಹಾರಾಷ್ಟ್ರದ ನಾಸಿಕ್ ನ ಮಹಿಳಾ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ. ಯುವ ಸಮುದಾಯವಾದುದರಿಂದ ಅವರನ್ನುದ್ದೇಶಿಸಿ ಸುಪ್ರಿಯಾ ತಮಾಷೆಯಾಗಿ ಲಘು ಶೈಲಿಯಲ್ಲಿಯೇ ಮಾತನಾಡಿದರು. 

''ನಾನು ಸಂಸತ್ತಿಗೆ ಹೋದಾಗ ಮೊದಲ ಭಾಷಣವನ್ನು ಆಸಕ್ತಿಯಿಂದ ಕೇಳುತ್ತೇನೆ. ನಂತರ ಎರಡನೇ, ಮೂರನೇ ಭಾಷಣ ಬರುತ್ತದೆ. ನಾಲ್ಕನೇ ಭಾಷಣದಲ್ಲಿ ಮೊದಲ ಮೂರು ಭಾಷಣದಲ್ಲಿ ಹೇಳಿರುವುದನ್ನೇ ಸಭಾಧ್ಯಕ್ಷರು ಪುನರಾವರ್ತಿಸುತ್ತಾರೆ. ನಾಲ್ಕನೇ ಸಲ ಸ್ಪೀಕರ್ ಏನು ಮಾತನಾಡಿದರು ಎಂದು ಕೇಳಿದರೆ ನಿಜಕ್ಕೂ ನನಗೆ ನೆನಪಿರುವುದಿಲ್ಲ'' ಎಂದು ಸುಪ್ರಿಯಾ ಸುಳೆ ಮನಬಿಚ್ಚಿ ಮಾತನಾಡಿದರು.

ನಾವು ಸದನದಲ್ಲಿ ಬೇರೆ ಸಂಸದರೊಂದಿಗೆ ಗಾಸಿಪ್ ಮಾತನಾಡುತ್ತೇವೆ, ಹರಟೆ ಹೊಡೆಯುತ್ತೇವೆ.ಮೇಲೆ ಗ್ಯಾಲರಿಯಲ್ಲಿ ಕುಳಿತುಕೊಂಡು ಅಥವಾ ಟಿವಿ ಮುಂದೆ ಕುಳಿತು ನೋಡುವವರು ನಾವು ಯಾವುದೋ ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸುತ್ತಿದ್ದೇವೆ ಎಂದು ಭಾವಿಸುತ್ತಾರೆ. ಚೆನ್ನೈಯ ಸಂಸದರೊಬ್ಬರ ಜೊತೆ ನಾನು ಮಾತನಾಡುತ್ತಿದ್ದೇನೆ ಎಂದರೆ ಚೆನ್ನೈ ಮಳೆ, ನೆರೆ ಪ್ರವಾಹದ ಕುರಿತು ಮಾತನಾಡುತ್ತಿದ್ದೇನೆ ಎಂದೇ ಭಾವಿಸುತ್ತಾರೆ. ಆದರೆ ನಾವು ನಿಜವಾಗಿಯೂ ಆ ವಿಷಯಗಳ ಕುರಿತು ಮಾತನಾಡುವುದೇ ಇಲ್ಲ. ನೀನು ಈ ಸೀರೆ ಎಲ್ಲಿ ತೆಗೆದುಕೊಂಡಿದ್ದು, ನಾನು ಎಲ್ಲಿ ಖರೀದಿಸಿದ್ದು ಮುಂತಾದ ವಿಷಯಗಳನ್ನು ಮಾತನಾಡುತ್ತೇವೆ. ನೀವು ವಿದ್ಯಾರ್ಥಿಗಳು ತರಗತಿಗಳಲ್ಲಿ ಗಾಸಿಪ್ ಮಾತನಾಡುವುದಿಲ್ಲವೇ, ಹಾಗೆಯೇ ನಾವು ಕೂಡ ಎಂದು ಸುಪ್ರಿಯಾ ಸುಳೆ ಹೇಳಿದಾಗ ಸಭಿಕರ ಕಡೆಯಿಂದ ನಗೆ ಮತ್ತು ಚಪ್ಪಾಳೆಯ ಸುರಿಮಳೆ.

ನಂತರ ಸಂಸತ್ತಿನಲ್ಲಿ ಮೀಸಲಾತಿ ವಿಷಯದ ಬಗ್ಗೆ ಮಾತನಾಡಿದ ಸುಪ್ರಿಯಾ, ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಿದರೆ ಸದನದ ಚರ್ಚೆ ಕೇವಲ ಪಾರ್ಲರ್, ಫೇಶಿಯಲ್, ಕ್ರೀಮು, ಸೀರೆಗಳ ಕುರಿತ ಚರ್ಚೆಗೆ ಮಾತ್ರ ಸೀಮಿತವಾಗಬಹುದು ಎಂದು ಪುರುಷ ಸಂಸದರು ಹಾಸ್ಯ ಮಾಡುತ್ತಾರೆ. ಆದರೆ ನೀವು ದೇಶಕ್ಕೆ ಏನು ಒಳ್ಳೆಯದನ್ನು ಮಾಡಿದ್ದೀರಿ ಎಂದು ನಾನು ಅವರನ್ನು ಕೇಳುತ್ತೇನೆ. ಹಾಗಾಗಿ ಮಹಿಳೆಯರಿಗೆ ಮೀಸಲಾತಿ ನೀಡಿದರೆ ಯಾವುದೇ ತೊಂದರೆಯಿಲ್ಲ ಎಂದು ನಾನು ಹೇಳುತ್ತೇನೆ ಎನ್ನುತ್ತಾರೆ.

ಯುವ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ಸುಪ್ರಿಯಾ ಸುಳೆ ಹಾಸ್ಯಭರಿತವಾಗಿ ಹಗುರ ಧಾಟಿಯಲ್ಲಿ ಮಾತನಾಡುತ್ತಿದ್ದರು.ಸುಪ್ರಿಯಾ ಸುಳೆ ಅವರ ಈ ಹೇಳಿಕೆ ನಮ್ಮ ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಅಷ್ಟೊಂದು ಇಲ್ಲ ಎಂದು ಎಲ್ಲೆಡೆ ಕೇಳಿಬರುತ್ತಿರುವ ಆರೋಪಕ್ಕೆ ತುಪ್ಪ ಸುರಿದಂತಾಗಿದೆ. ವಿವಾದ ಎದ್ದರೂ ಅಚ್ಚರಿಪಡಬೇಕಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com