
ನವದೆಹಲಿ: ರಾಜಧಾನಿ ದೆಹಲಿಯಲ್ಲಿನ ವಾಯುಮಾಲಿನ್ಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಕೈಗೊಂಡಿದ್ದ ಸಮ-ಬೆಸ ಸಂಖ್ಯೆ ಪರಿಕ್ಷಾರ್ಥ ಪ್ರಯೋಗ ಇದೇ ಜನವರಿ 15ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ದೆಹಲಿ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ.
ಜನವರಿ 15ರ ಬಳಿಕ ಈ ಮಾದರಿ ಇರುವುದಿಲ್ಲ. ಸಾಮಾನ್ಯದಂತೆ ಎಲ್ಲ ಸಂಖ್ಯೆಯ ವಾಹನಗಳು ಚಲಿಸಬಹುದು ಎಂದು ದೆಹಲಿಯ ಸಾರಿಗೆ ಸಚಿವ ಗೋಪಾಲ್ ರಾಯ್ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, "ಸರ್ಕಾರದ ಈ ನೂತನ ಯೋಜನೆಯ ಸಾಧಕ-ಭಾಧಕಗಳು ಕುರಿತು ಚರ್ಚೆ ನಡೆಯಲಿದೆ. ಅಧಿಕಾರಿಗಳಿಂದ ಯೋಜನೆಯ ಕುರಿತು ಅಂಕಿ-ಅಂಶಗಳ ಮಾಹಿತಿ ಪಡೆಯಲಾಗುತ್ತಿದೆ. ಜನವರಿ 15ರ ಬಳಿಕ ಸರ್ಕಾರದ ಈ ಯೋಜನೆಯನ್ನು ಅಂತ್ಯಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಶನಿವಾರ ದೆಹಲಿ ಕೋರ್ಟ್ ಗೆ ಮಾಹಿತಿ ನೀಡಿದ ದೆಹಲಿ ಸರ್ಕಾರ, ಯೋಜನೆ ಕುರಿತಂತೆ ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಕೇಳಲಾಗಿದೆ. ಮಾಹಿತಿ ಬಂದ ಬಳಿಕ ಅವುಗಳ ಸಾಧಕ-ಭಾದಕಗಳನ್ನು ಚರ್ಚಿಸಿ ಸಮ-ಬೆಸ ಯೋಜನೆಯನ್ನು ಮುಂದುವರೆಸುವ ಅಥವಾ ಕೈಬಿಡುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದೆ. ಇನ್ನು ಇದೇ ಪ್ರಕರಣ ಸಂಬಂಧ ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದು, ಪ್ರಕರಣದ ತೀರ್ಪನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ಸಮ-ಬೆಸ ಸಂಖ್ಯೆ ಮಾದರಿ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವೇ ಎಂದು ದೆಹಲಿ ನ್ಯಾಯಾಲಯ ಸರ್ಕಾರವನ್ನು ಕೇಳಿತ್ತು.
Advertisement