ತಿರುವನಂತಪುರಂ: ಪಠಾಣ್‌ಕೋಟ್ ಉಗ್ರದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನಿ ಗಾಯಕ ಗುಲಾಂ ಅಲಿ ಅವರು ಕೇರಳದಲ್ಲಿ ನಡೆಸಲುದ್ದೇಶಿಸುತ್ತಿರುವ ಗಜಲ್ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲು ಶಿವಸೇನೆ ಆದೇಶಿಸಿದೆ.
ಜನವರಿ 14 ಕ್ಕೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಮತ್ತು 17 ರಂದು ಕೋಝಿಕ್ಕೋಡ್‌ನಲ್ಲಿಯೂ ಗುಲಾಂ ಅಲಿ ಕಾರ್ಯಕ್ರಮ ನಿಗದಿಯಾಗಿದೆ. ಒಂದು ವೇಳೆ ಕಾರ್ಯಕ್ರಮ ನಡೆದರೆ, ಕಾರ್ಯಕ್ರಮದ ವೇಳೆ ನಮ್ಮ ಕಾರ್ಯಕರ್ತರು ವೇದಿಕೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಶಿವಸೇನೆ ಬೆದರಿಕೆ ನೀಡಿದೆ.
75ರ ಹರೆಯದ ಖ್ಯಾತ ಗಜಲ್ ಗಾಯಕ ಗುಲಾಂ ಅಲಿ ಜನವರಿ 14 ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಕೇರಳದ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾದ ಸ್ವರಲಯ ಗುಲಾಂ ಗಜಲ್ ಕಾರ್ಯಕ್ರಮದ ಆಯೋಜಕರಾಗಿದ್ದಾರೆ.
ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರ ದಾಳಿಯಾಗಿ ದೇಶಕ್ಕೆ ದೇಶವೇ ಸೂಕತದ ಛಾಯೆಯಲ್ಲಿರುವಾಗ ಸಂಗೀತ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಶಿವಸೇನೆಯ ರಾಜ್ಯ ಸಂಘಟನೆಯ ಸದಸ್ಯ ಪಿ. ಅಜಿ ಹೇಳಿದ್ದಾರೆ.
ನಾವು ಕಲೆ ವಿರುದ್ಧವಲ್ಲ, ನಾವು ಪಾಕಿಸ್ತಾನದ ವಿರುದ್ಧ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅಜಿ ಹೇಳಿದ್ದಾರೆ.
ಅದೇ ವೇಳೆ ಅಲಿ ಅವರನ್ನು ಸ್ವಾಗತಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬದಲು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಉಗ್ರ ದಾಳಿಯಲ್ಲಿ ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಿ ಎಂದು ಶಿವಸೇನೆ ಸಲಹೆ ನೀಡಿದೆ.
ಜನವರಿ 15 ಮತ್ತು 17 ರಂದು ಶಿವಸೇನೆ ಕೇರಳದಾದ್ಯಂತ ಪ್ರತಿಭಟನಾ ದಿನವನ್ನು ಆಚರಿಸಲಿದೆ.