ಕಣಿವೆ ರಾಜ್ಯ ಸರ್ಕಾರಕ್ಕೆ ಆಪತ್ತು ತಂದಿಟ್ಟ ಮೆಹಬೂಬಾ ಷರತ್ತು

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಅನಿಶ್ಚಿತತೆ ತಲೆದೋರುವ ಸಾಧ್ಯತೆ ಇದೆ. ಸರ್ಕಾರ ರಚನೆ ನಿಟ್ಟಿನಲ್ಲಿ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ನಾಲ್ಕು ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ..
ಪಿಡಿಪಿ ಮುಖ್ಯಸ್ಥೆ ಮುಫ್ತಿ ಮೆಹಬೂಬ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ
ಪಿಡಿಪಿ ಮುಖ್ಯಸ್ಥೆ ಮುಫ್ತಿ ಮೆಹಬೂಬ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಅನಿಶ್ಚಿತತೆ ತಲೆದೋರುವ ಸಾಧ್ಯತೆ ಇದೆ. ಸರ್ಕಾರ ರಚನೆ ನಿಟ್ಟಿನಲ್ಲಿ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ನಾಲ್ಕು ಷರತ್ತುಗಳನ್ನು  ಮುಂದಿಟ್ಟಿದ್ದಾರೆ ಎಂದು `ಟೈಮ್ಸ್ ನೌ' ಸುದ್ದಿ ವಾಹಿನಿ ವರದಿ ಮಾಡಿದೆ.

ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಫ್ತಿ ಅವರನ್ನು ಭಾನುವಾರ ಭೇಟಿಯಾದದ್ದು ರಾಜಕೀಯ ವದಂತಿಗಳಿಗೆ ಇಂಬು ಕೊಟ್ಟಂತಾಗಿದೆ. ಆದರೆ ಕಾಂಗ್ರೆಸ್  ನಾಯಕರಾದ ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ ``ಭೇಟಿ ವೇಳೆ ರಾಜಕೀಯ ಏನೂ ಚರ್ಚೆ ಯಾಗಿಲ್ಲ'' ಎಂದಿದ್ದಾರೆ. ಮೆಹಬೂಬಾ ಮುಫ್ತಿ ಬಿಜೆಪಿ ಜತೆ ಅಧಿಕಾರ ಹಂಚಿಕೊಳ್ಳಬೇಕಾದರೆ  ಉಪಮುಖ್ಯಮಂತ್ರಿ ಹುದ್ದೆ ಕೇಳಬಾರದು, ಸೂಕ್ಷ್ಮ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡುವಂತಿಲ್ಲ, ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಪಿಡಿಪಿಗೆ ಬಿಟ್ಟುಕೊಡಬೇಕು, ಕೇಂದ್ರದಿಂದ ಹೆಚ್ಚಿನ ನೆರವು ನೀಡಬೇಕು ಎಂಬ ನಾಲ್ಕು ಷರತ್ತುಗಳನ್ನು ವಿಧಿಸಿದ್ದಾರೆಂದು `ಟೈಮ್ಸ್ ನೌ' ಹೇಳಿದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಪ್ರತಿ ಷರತ್ತೊಡ್ಡಿದೆ. ಸರದಿ ಪ್ರಕಾರ ಸಿಎಂ ಹುದ್ದೆ ಬೇಕು ಮತ್ತು ಜಮ್ಮು  ಪ್ರದೇಶಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದುಕೇಳಿದೆ. ಆದರೆ, ಬಿಜೆಪಿಯ ಮೊದಲ ಬೇಡಿಕೆಯನ್ನು ಮೆಹಬೂಬಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

20 ನಿಮಿಷಗಳ ಭೇಟಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೆಹಬೂಬಾ ಮುಫ್ತಿಯವರ ಜತೆಗೆ 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪಿಡಿಪಿ ನಾಯಕ ಮುಫ್ತಿ  ಮೊಹಮ್ಮದ್ ಸಯೀದ್ ಕಣಿವೆ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದು ಶ್ಲಾಘಿಸಿದರು. ಅವರ ನಿಧನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನಷ್ಟವಾಗಿದೆ. ಅವರು ಎಲ್ಲರಿಗೂ ಬೇಕಾದವರು  ಎಂದು ಸೋನಿಯಾ ಬಣ್ಣಿಸಿದರು. 2002ರಿಂದ 2008ರ ವರೆಗೆ ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಪಿಡಿಪಿ ಮೈತ್ರಿ ಸರ್ಕಾರ ನಡೆಸಿದ್ದವು. ಸೋನಿಯಾ ಬಳಿಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ  ಹಾಗೂ ಬಿಜೆಪಿ ನಾಯಕ ನಿರ್ಮಲ್ ಸಿಂಗ್ ಮುಫ್ತಿ ಜತೆ ಮಾತುಕತೆ ನಡೆಸಿದರು. ಕೇಂದ್ರದ ಬಿಜೆಪಿ ನಾಯಕರ ಪರವಾಗಿ ಸಯೀದ್ ನಿಧನದ ಸಂತಾಪ ತಿಳಿಸಿದ್ದಾಗಿ ಗಡ್ಕರಿ ಹೇಳಿದ್ದಾರೆ. ಈಗ  ರಾಜಕೀಯ ಮಾತನಾಡುವ ಸಮಯವಲ್ಲ. ಪ್ರವಾಸೋದ್ಯಮ ಸೇರಿದಂತೆ ಹಲವು ಅಭಿವೃದ್ಧಿ ವಿಚಾರಗಳ ಬಗ್ಗೆ ಸಯೀದ್ ಅವರು ಕೇಂದ್ರ ಸರ್ಕಾರದ ಜತೆ ಚರ್ಚಿಸಿದ್ದರು. ಜಮ್ಮು ಮತ್ತು ಕಾಶ್ಮೀರ  ಜನರಿಗೆ ನೀಡಿದ ವಾಗ್ದಾನ ಪೂರೈಸಲು ನೆರವಾಗುತ್ತೇವೆ ಎಂದರು ಗಡ್ಕರಿ.

ಮೈತ್ರಿ ಮುಂದುವರಿಕೆ: ಈ ನಡುವೆ, ಪಿಡಿಪಿ ಜತೆಗೆ ಮೈತ್ರಿ ಮುಂದುವರಿಯಲಿದೆ ಎಂದು ಬಿಜೆಪಿ ನಾಯಕ ನಿರ್ಮಲ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ``ಇದುವರೆಗೆ ಶೋಕಾಚರಣೆ ಇತ್ತು.  ಸರ್ಕಾರ ರಚನೆ ಬಗ್ಗೆ ಮಾತುಕತೆಗಳು ಮುಂದುವರಿದಿವೆ. ಶೀಘ್ರ ಅಂತಿಮ ತೀರ್ಮಾನವಾಗಲಿದೆ ಎಂದು ಆಶಿಸುತ್ತೇನೆ''ಎಂದಿದ್ದಾರೆ. ರಾಜ್ಯಪಾಲರ ಪತ್ರ ಸಿಕ್ಕಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಸರ್ಕಾರ ರಚನೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಜಾರಿಯಾಗಿರುವ ರಾಜ್ಯಪಾಲರ ಆಳ್ವಿಕೆ ಬಗ್ಗೆ ಪಿಡಿಪಿ, ಬಿಜೆಪಿ ಮೌನ  ವಹಿಸಿವೆ.

ಪಿಡಿಪಿ ಷರತ್ತುಗಳು
1. ಬಿಜೆಪಿಗೆ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ
2. ಸೂಕ್ಷ್ಮ ವಿಚಾರಗಳ ಬಗ್ಗೆ ಪ್ರಸ್ತಾಪ ಬೇಡ
3. ಸಂಪುಟದ ಪ್ರಮುಖ ಖಾತೆಗಳು ಪಿಡಿಪಿಗೆ
4. ಕೇಂದ್ರದಿಂದ ಹೆಚ್ಚಿನ ಸಹಕಾರ ನೆರವು

ಬಿಜೆಪಿ ಬೇಡಿಕೆ
1. ಸರದಿ ಪ್ರಕಾರ ಮುಖ್ಯಮಂತ್ರಿ ಹುದ್ದೆ ಹಂಚಿಕೆ
2. ಜಮ್ಮು ಪ್ರದೇಶಕ್ಕೆ ಸಂಪುಟ ಪ್ರಾತಿನಿಧ್ಯ

ಈ ಭೇಟಿಯಲ್ಲಿ ರಾಜಕೀಯ ಚರ್ಚಿಸಲಾಗಿದೆ ಎಂದು ತಿಳಿಯುವ ಅಗತ್ಯವಿಲ್ಲ. ಮುಫ್ತಿ ಮೊಹಮ್ಮದ್ ಸಯೀದ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲು ಇಲ್ಲಿಗೆ ಆಗಮಿಸಿದ್ದೇವೆ.
-ಗುಲಾಂ ನಬಿ ಆಜಾದ್, ಕಾಂಗ್ರೆಸ್ ನಾಯಕ

ಕೇಂದ್ರದ ಪರವಾಗಿ ಸಂತಾಪ ವ್ಯಕ್ತಪಡಿಸಲು ಬಂದಿದ್ದೇನೆ. ಜಮ್ಮುಕಾಶ್ಮೀರ ವಿಚಾರದಲ್ಲಿ ಸಯೀದ್ ಅವರಿಗೆ ನೀಡಿದ ವಾಗ್ದಾನ ಪೂರೈಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ. ರಾಜಕೀಯ
ಮಾತನಾಡುವ ಸಮಯ ಇದಲ್ಲ.
-ನಿತಿನ್ ಗಡ್ಕರಿ ಕೇಂದ್ರ ಸಾರಿಗೆ ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com