
ನವದೆಹಲಿ: ಭಾರತದ ಸೇನಾ ಪಡೆ ಯಾವುದೇ ಕೆಲಸ ಮಾಡಲು ಸಿದ್ಧವಿದೆ ಎಂದು ಭೂ ಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಭಾರತಕ್ಕೆ ನೋವು ಮಾಡಿದವರಿಗೆ ಅದೇ ರೀತಿಯ ಭಾವನೆ ಉಂಟು ಮಾಡುವಂತೆ ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ಜ.ಸುಹಾಗ್ ಹೇಳಿರುವುದು ಗಮನಾರ್ಹವಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ಯಾವುದಾರೂ ರೀತಿಯಲ್ಲಿ ದಾಳಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಬುಧವಾರ ಜ.ಸುಹಾಗ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ 17 ಶಿಬಿರಗಳು ಉಗ್ರ ಕೃತ್ಯಗಳಿಗೆ ತರಬೇತಿ ನೀಡುವಲ್ಲಿ ನಿರತವಾಗಿವೆ ಎಂದು ಅವರು ತಿಳಿಸಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಒತ್ತಡಗಳ ಹಿನ್ನೆಲೆಯಲ್ಲಿ ಕೆಲವನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.
ಕೊರತೆ ಏನೂ ಆಗಿಲ್ಲ: ಪಠಾಣ್ಕೋಟ್ ದಾಳಿಯಲ್ಲಿ ಸೇನೆ ಮತ್ತು ಇತರ ಸಂಸ್ಥೆಗಳ ನಡುವೆ ಸಂವಹನ ಕೊರತೆ ಆಗಿಲ್ಲ. ಎಲ್ಲ ಸಂಸ್ಥೆಗಳೂ ಒಟ್ಟಾಗಿ ಕಾರ್ಯಾಚರಣೆ ನಡೆಸಿವೆ ಎಂದು ಅವರು ಹೇಳಿದ್ದಾರೆ. ಎಲ್ಲ ರೀತಿಯ ಕಾರ್ಯಾಚರಣೆಯಿಂದಲೂ ಸೇನಾ ಪಡೆ ಪಾಠ ಕಲಿತುಗೊಳ್ಳುತ್ತಿದೆ ಎಂದು ಭೂಸೇನಾ ಮುಖ್ಯಸ್ಥ ಹೇಳಿದ್ದಾರೆ.
ಚೀನಾ ವೈರ್ಲೆಸ್ ಸೆಟ್ ವಶಕ್ಕೆ: ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಎನ್ಐಎ ತನಿಖೆ ಮುಂದುವರಿಸಿದೆ. ಪಠಾಣ್ಕೋಟ್ ವಾಯುನೆಲೆಯ ಹೊರಭಾಗದಲ್ಲಿ ನಿಂತಿದ್ದ ವಾಹನವೊಂದರಿಂದ ಚೀನಾ ನಿರ್ಮಿತ ವೈರ್ಲೆಸ್ ಸೆಟ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ. ಅದನ್ನು ಚಂಡೀಗಡದಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಶಾಲೆಗೆ ಕಳುಹಿಸಲಾಗಿದೆ. ಮತ್ತೊಂದೆಡೆ ಬುಧವಾರವೂ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್‍ರ ವಿಚಾರಣೆ ನಡೆಸಲಾಯಿತು.
Advertisement