ನವದೆಹಲಿ: ದೆಹಲಿಯ ಬರಖಾಂಬ ರಸ್ತೆಯಲ್ಲಿರುವ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಕಚೇರಿ ಮೇಲೆ ಗುರುವಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ, ಕಿಟಕಿ ಗಾಜು ಹಾಗೂ ಕಂಪ್ಯೂಟರ್ಗಳನ್ನು ಧ್ವಂಸಗೊಳಿಸಿದ್ದಾರೆ.
ಇಂದು ಮಧ್ಯಾಹ್ನ ಕಾರ್ಯಕರ್ತರ ಗುಂಪೊಂದು ಪಾಕ್ ಏರ್ ಲೈನ್ಸ್ ಕಚೇರಿ ಮೇಲೆ ದಾಳಿ ಮಾಡಿದ್ದು, ದಾಳಿ ಸುದ್ದಿ ತಿಳಿಯುತಿದ್ದಂತೆಯೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯನ್ನು ಖಚಿತ ಪಡಿಸಿದ ಡಿಸಿಪಿ ಜತಿನ್ ನರ್ವಾಲ್ ಅವರು, ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ದಾಳಿಯ ಬೆನ್ನಲ್ಲೇ ಭಾರತ ಸರ್ಕಾರವನ್ನು ಸಂಪರ್ಕಿಸಿದ ಪಾಕಿಸ್ತಾನ ರಾಜತಾಂತ್ರಿಕ ಕಚೇರಿಯು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಪಿಐಎಯ ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ, ರಕ್ಷಣೆ ಒದಗಿಸುವುದು ಭಾರತ ಸರ್ಕಾರದ ಹೊಣೆ ಎಂದು ಪಾಕಿಸ್ತಾನ ರಾಜತಾಂತ್ರಿಕ ಕಚೇರಿ ವಕ್ತಾರ ಹೇಳಿದ್ದಾರೆ.