
ನವದೆಹಲಿ: ಗೋಹತ್ಯೆ ವಿಷಯದಲ್ಲಿ ನಮ್ಮ ಕುಟುಂಬವನ್ನು ಅನಗತ್ಯವಾಗಿ ಗುರಿಯಾಗಿಸಿಕೊಂಡು ಬಲಿಪಶು ಮಾಡಲಾಗುತ್ತಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮದ್ ಶಮೀ ತಂದೆ ಆರೋಪಿಸಿದ್ದಾರೆ.
ಗೋಹತ್ಯೆ ಪ್ರಕರಣದ ಆರೋಪಿಗಳ ಪರವಾಗಿ ಪೊಲೀಸರ ವಿರುದ್ಧ ಹಲ್ಲೆ ನಡೆಸಿ, ಅವರ ಬಿಡುಗಡೆಗೆ ಒತ್ತಡ ಹೇರಿದ ಆರೋಪಕ್ಕೆ ಗುರಿಯಾಗಿದ್ದ ವೇಗದ ಬೌಲರ್ ಶಮಿ ಸಹೋದರ ಮೊಹಮ್ಮದ್ ಹಸೀಬ್ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಮರುದಿನವೇ ತಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ತೌಸೀಫ್ ಆಪಾದಿಸಿದ್ದಾರೆ.
ಹಸೀಬ್ ಘಟನಾ ಸ್ಥಳದಲ್ಲಿದ್ದ ಅನೇಕರ ಹಾಗೆ ಅಲ್ಲಿಗೆ ವೀಕ್ಷಕನಾಗಿ ಹೋಗಿದ್ದನಷ್ಟೇ. ಆತನನ್ನು ಸುಖಾಸುಮ್ಮನೆ ಪ್ರಕರಣದಲ್ಲಿ ಎಳೆದು ತರಲಾಗಿದೆ. ಮಗ ಶಮಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮೇಲೆ ನಮಗೆ ಸಿಗುತ್ತಿರುವ ಪ್ರಚಾರದಿಂದ ಅಸೂಯೆಗೊಂಡಿರುವ ಕೆಲವರು ನಮ್ಮ ಕುಟುಂಬದ ಮೇಲೆ ಸಂಚು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಈ ವಿಚಾರವನ್ನು ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ತಿಂಗಳ ಹಿಂದೆ ತಂದಿದ್ದೆ. ಅದರ ಫಲಶ್ರುತಿಯೇ ಇದು(ಬಂಧನ). ಗೋಹತ್ಯೆಯಂಥ ಪದವನ್ನು ನಮ್ಮ ವಿರುದ್ಧ ದ್ವೇಷಸಾಧನೆಗಾಗಿ ಬಳಸಲಾಗುತ್ತಿದೆ ಎಂದು ತೌಸೀಫ್ ದೂರಿದ್ದಾರೆ.
Advertisement